ADVERTISEMENT

ಪೌರಕಾರ್ಮಿಕರಲ್ಲಿ ಸ್ವಚ್ಛತೆ, ಆರೋಗ್ಯದ ಕಾಳಜಿ ಇರಲಿ: ಡಾ. ಸಿಸ್ಟರ್‌ ಅರ್ಪಣಾ

​ಪ್ರಜಾವಾಣಿ ವಾರ್ತೆ
Published 5 ಮೇ 2022, 14:46 IST
Last Updated 5 ಮೇ 2022, 14:46 IST
‘ಸ್ವಚ್ಛತೆಯ ಹರಿಕಾರರಿಗೊಂದು ಸಲಾಂʼ ಕಾರ್ಯಕ್ರಮದ ಅಂಗವಾಗಿ ಪೌರಕಾರ್ಮಿಕರಿಗೆ ವೈಯಕ್ತಿಕ ಸ್ವಚ್ಛತೆ ಕಾಪಾಡಲು ಪೂರಕವಾದ ಕಿಟ್‌ ಮತ್ತು ಕುಕ್ಕರ್‌ ವಿತರಿಸಲಾಯಿತು
‘ಸ್ವಚ್ಛತೆಯ ಹರಿಕಾರರಿಗೊಂದು ಸಲಾಂʼ ಕಾರ್ಯಕ್ರಮದ ಅಂಗವಾಗಿ ಪೌರಕಾರ್ಮಿಕರಿಗೆ ವೈಯಕ್ತಿಕ ಸ್ವಚ್ಛತೆ ಕಾಪಾಡಲು ಪೂರಕವಾದ ಕಿಟ್‌ ಮತ್ತು ಕುಕ್ಕರ್‌ ವಿತರಿಸಲಾಯಿತು   

ಬೆಂಗಳೂರು: ‘ನಗರದ ಸ್ವಚ್ಛತೆ, ಆರೋಗ್ಯ ಕಾಪಾಡುವಲ್ಲಿ ಮುಂಚೂಣಿಯಲ್ಲಿರುವ ಪೌರ ಕಾರ್ಮಿಕರು ಸ್ವಂತ ಮತ್ತು ಅವರ ಕುಟುಂಬದ ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಬೇಕು’ ಎಂದು ಮೌಂಟ್‌ ಕಾರ್ಮೆಲ್‌ ಕಾಲೇಜಿನ ಡಾ. ಸಿಸ್ಟರ್‌ ಅರ್ಪಣಾ ಹೇಳಿದರು.

ಕಾಲೇಜಿನ ಸಭಾಂಗಣದಲ್ಲಿ ಮೈಕ್ರೊ ಜೋನ್‌ ವಿಭಾಗವು ಐಎಸ್‌ಆರ್‌ಸಿ ಜೊತೆ ಸೇರಿ ಆಯೋಜಿಸಿದ್ದ ʼಸ್ವಚ್ಛತೆಯ ಹರಿಕಾರರಿಗೊಂದು ಸಲಾಂʼ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಕಾಲೇಜು ಹಾಗೂ ವಿದ್ಯಾರ್ಥಿಗಳು ಸಮುದಾಯದ ಅಭಿವೃದ್ಧಿಯಲ್ಲಿ ತೋರಬೇಕಾದ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿದ್ಯಾರ್ಥಿನಿಯರಿಗೆ ಹಾಗೂ ಪೌರ ಕಾರ್ಮಿಕರಿಗೆ ವಿವರಿಸಿದರು.

ವಿದ್ಯಾರ್ಥಿಗಳು ಪೌರಕಾರ್ಮಿಕರ ದೈನಂದಿನ ಜೀವನ ಮತ್ತಿ ಅವರು ಎದುರಿಸುವ ಸವಾಲುಗಳನ್ನು ಕಿರು ನಾಟಕ, ಸಂಗೀತ, ಮೂಕಾಭಿನಯದ ಮೂಲಕ ‌ಪ್ರದರ್ಶಿಸಿದರು. ಸೂಕ್ಷ್ಮಾಣು ಜೀವವಿಜ್ಞಾನದ ವಿದ್ಯಾರ್ಥಿಗಳು ವೈಯಕ್ತಿಕ ಸ್ವಚ್ಛತೆ ಮತ್ತು ಸಾಮೂಹಿಕ ಸ್ವಚ್ಛತೆ ಪಾಲಿಸುವುದರಿಂದ ವೈರಸ್‌ ಮತ್ತು ಬ್ಯಾಕ್ಟೀರಿಯಾಗಳಿಂದ ಹೇಗೆ ದೂರವಿರಬಹುದು ಎಂಬುದರ ಅರಿವು ಮೂಡಿಸಿದರು. ನಗರವನ್ನು ಸ್ವಚ್ಛವಾಗಿರಿಸಲು ಪೌರಕಾರ್ಮಿಕರು ನೀಡುತ್ತಿರುವ ಸೇವೆಗೆ ವಿದ್ಯಾರ್ಥಿನಿಯರು ನೃತ್ಯ ಹಾಗೂ ಹಾಡಿನ ಮೂಲಕ ಧನ್ಯವಾದ ಅರ್ಪಿಸಿದರು. ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ವೈಯಕ್ತಿಕ ಸ್ವಚ್ಛತೆ ಕಾಪಾಡಲು ಪೂರಕವಾದ ಕಿಟ್‌ ಮತ್ತು ಕುಕ್ಕರ್‌ ವಿತರಿಸಲಾಯಿತು.

ADVERTISEMENT

ಉಪ ಪ್ರಾಂಶುಪಾಲರಾದ ‌ಚಾರ್ಮೈನ್‌ ಜೆರೋಮ್‌, ಕ್ಯಾಂಪಸ್‌ ಸಂಯೋಜಕರಾದ ‌ಸಿಸ್ಟರ್‌ ಸಜಿತ ಮತ್ತು ಲೇಖಾ ಜಾರ್ಜ್‌, ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಸರಯೂ ಮೋಹನ್‌, ಮೈಕ್ರೊ ಜೋನ್‌ ಸಂಯೋಜಕರು ಅನು ಮರಿಯಮ್‌ ಕುರಿಯನ್‌, ಐಎಸ್‌ಆರ್‌ಸಿ ಸಂಯೋಜಕರು ರಜನಿ ಕೋರ, ಮೈಕ್ರೊ ಬಯಾಲಜಿ ಕಾರ್ಯದರ್ಶಿ ಋತು ಫರ್ನಾಂಡಿಸ್‌, ಸಹ ಕಾರ್ಯದರ್ಶಿ ರಚನಾ ಬಿ.ಆರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.