ADVERTISEMENT

ಸಚಿವರು, ಅಧಿಕಾರಿಗಳ ಎದುರಲ್ಲೇ ಬೈದಾಡಿಕೊಂಡ ಸಂಸದ- ಶಾಸಕ

ಸಾರ್ವಜನಿಕ ನಡವಳಿಕೆ ಮರೆತ ಜನಪ್ರತಿನಿಧಿಗಳಿಂದ ಜಗಳ

​ಪ್ರಜಾವಾಣಿ ವಾರ್ತೆ
Published 9 ಮೇ 2020, 17:48 IST
Last Updated 9 ಮೇ 2020, 17:48 IST
   

ದಾವಣಗೆರೆ: ಕೋವಿಡ್‌–19 ಕುರಿತು ಶನಿವಾರ ನಡೆದ ಸಭೆಯಲ್ಲಿ ಬಿಜೆಪಿಯ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತು ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವಾಚ್ಯ ಪದಗಳಿಂದ ಬೈದಾಡಿಕೊಂಡಿದ್ದಾರೆ. ವೈದ್ಯಕೀಯ ಸಚಿವ ಡಾ. ಸುಧಾಕರ್‌ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಇದಕ್ಕೆ ಮೂಕಸಾಕ್ಷಿಯಾದರು.

ಶುದ್ಧ ಕುಡಿಯುವ ಘಟಕದ ನೀರನ್ನು ಜನರಿಗೆ ಉಚಿತವಾಗಿ ನೀಡಬೇಕು ಎಂದು ಮಾಡಾಳ್ ವಿರೂಪಾಕ್ಷಪ್ಪ ಒತ್ತಾಯಿಸಿದಾಗ ಸಂಸದರು ಆಕ್ಷೇಪಿಸಿದರು.

‘ನಾನು ಸರ್ಕಾರವನ್ನು ಕೇಳುತ್ತಿದ್ದೇನೆ’ ಎಂದು ಶಾಸಕರು ಹೇಳಿದಾಗ, ‘ಹಣ ನಿಮ್ಮಪ್ಪನ ಮನೆಯಿಂದ ಕೊಡ್ತಿಯೇನೋ’ ಎಂದ ಸಂಸದರು ಕೇಳಿದರು. ಸಿಟ್ಟಿಗೆದ್ದ ಶಾಸಕರು, ‘ನಿನ್ನಪ್ಪನ ಮನೆಯಿಂದ ಕೊಡ್ತಿಯಾ’ ಎಂದು ಮರು ಪ್ರಶ್ನಿಸಿದರು. ನಂತರ ಇಬ್ಬರೂ ಕೈ ಕೈ ಮಿಲಾಯಿಸಲು ಮುಂದಾಗಿದ್ದರು.

ADVERTISEMENT

ಗಂಡ–ಹೆಂಡತಿ ಜಗಳ: ಸಿದ್ದೇಶ್ವರ

‘ನಮ್ಮದು ಗಂಡ, ಹೆಂಡತಿ ಜಗಳದಂತೆ. ಇವತ್ತು ಗುದ್ದಾಡುತ್ತೇವೆ. ನಾಳೆ ಒಂದಾಗುತ್ತೇವೆ. ನೀವು ಮಾಧ್ಯಮದವರು ದೊಡ್ಡದು ಮಾಡದಿದ್ದರೆ ಅದೇ ಒಳ್ಳೆಯದು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಘಟನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ. ‘ಕೋವಿಡ್‌–19 ಕುರಿತ ಸಭೆಯಲ್ಲಿ ವಿರೂಪಾಕ್ಷಪ್ಪ ಕುಡಿಯುವ ನೀರಿನ ಬಗ್ಗೆ ಮಾತನಾಡಿದ್ದರಿಂದ ಸಚಿವರಿಗೆ ಇರಿಸುಮುರಿಸು ಆಗಿದ್ದು, ಅವರು ಅದನ್ನು ನನ್ನಲ್ಲಿ ಹೇಳಿದರು. ನಾನು ಬುದ್ಧಿವಾದ ಹೇಳಿದೆ. ಅವನಿಗೆ ಆಗಲಿಲ್ಲ. ನಾನು ಗೌರವ ಬಿಟ್ಟು ಮಾತನಾಡಿಲ್ಲ’ ಎಂದು ಸಮರ್ಥಿಸಿಕೊಂಡರು.

ಕೇಳಿದ್ದರಲ್ಲಿ ತಪ್ಪೇನಿದೆ: ಮಾಡಾಳ್‌

‘ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 20 ಲೀಟರ್‌ಗೆ ₹ 5 ತೆಗೆದುಕೊಳ್ಳಲಾಗುತ್ತಿದೆ. ಲಾಕ್‌ಡೌನ್‌ ಅವಧಿಯಲ್ಲಿ ಜನರಿಗೆ ಉಚಿತವಾಗಿ ನೀಡಿದರೆ ಒಳ್ಳೆಯದು. ಕನಿಷ್ಠ ಹಿಂದೆ ಇದ್ದ ₹ 2ಕ್ಕೆ ಇಳಿಸಬೇಕು ಎಂದು ನಾನು ಕೇಳಿದೆ. ಜನರು ಸಂಕಷ್ಟದಲ್ಲಿರುವಾಗ ನಾನು ಕೇಳಿದ್ರಲ್ಲಿ ತಪ್ಪೇನಿದೆ ಹೇಳಿ. ತಪ್ಪಿದ್ದರೆ ತಿದ್ದಿಕೊಳ್ಳುವೆ’ ಎಂದು ಮಾಡಾಳ್‌ ವಿರೂಪಾಕ್ಷಪ್ಪ ಪ್ರತಿಕ್ರಿಯಿಸಿದ್ದಾರೆ. ‘ನೀರಿನ ವೆಚ್ಚ ಭರಿಸಲು ಪಂಚಾಯಿತಿಗಳಲ್ಲಿ ದುಡ್ಡಿಲ್ಲ. ಸರ್ಕಾರ ಭರಿಸ ಬೇಕು ಎಂದು ನಾನು ಹೇಳಿದೆ. ಅಪ್ಪನ ಮನೆಯ ದುಡ್ಡಾ ಎಂದು ಸಂಸದರು ಯಾಕೆ ಕೇಳಬೇಕಿತ್ತು’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.