ಬೆಂಗಳೂರು: ‘ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಅಣ್ಣ ಎಂ.ಪಿ.ದಾರಕೇಶ್ವರಯ್ಯ ಊಸರವಳ್ಳಿ ತರಹ ಬಣ್ಣ ಬದಲಾಯಿಸುವ ಮೂಲಕ ಬೇಡ ಜಂಗಮ ಜಾತಿಯ ಪ್ರಮಾಣಪತ್ರದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಸರ್ಕಾರದ ಪರ ವಿಶೇಷ ವಕೀಲರು ಹೈಕೋರ್ಟ್‌ಗೆ ಅರುಹಿದರು.
‘ಪರಿಶಿಷ್ಟ ಜಾತಿಗೆ ಮೀಸಲಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬೇಡ ಜಂಗಮ ಜಾತಿಯ ಪ್ರಮಾಣಪತ್ರ ಪಡೆದಿರುವ ಎಂ.ಪಿ.ದಾರಕೇಶ್ವರಯ್ಯ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ’ ಎಂದು ಆಕ್ಷೇಪಿಸಿ ದಾಸರಹಳ್ಳಿಯ ಎಂ.ಚಂದ್ರ ಬಿನ್ ಮುನಿಯಪ್ಪ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ಹಾಜರಾಗಿದ್ದ ವಿಶೇಷ ವಕೀಲ ಸಿ.ಜಗದೀಶ್, ‘ದಾರಕೇಶ್ವರಯ್ಯ ಈ ಮೊದಲು ಬೆಂಗಳೂರು ಉತ್ತರ ತಹಶೀಲ್ದಾರ್ ಅವರಿಂದ ಪಡೆದಿದ್ದ ಬೇಡ ಜಂಗಮ ಜಾತಿ ಪ್ರಮಾಣಪತ್ರ ರದ್ದಾಗಿತ್ತು. ಈಗ ಬೆಂಗಳೂರು ದಕ್ಷಿಣ ತಹಶೀಲ್ದಾರ್ ಅವರಿಂದ ಇದೇ ರೀತಿಯ ಜಾತಿ ಪ್ರಮಾಣಪತ್ರವನ್ನು ಪಡೆದಿದ್ದಾರೆ. ಎರಡೆರಡು ಬಾರಿ ಇಂತಹ ಪ್ರಮಾಣಪತ್ರ ಪಡೆದು ಬಣ್ಣ ಬದಲಾಯಿಸುವ ಮೂಲಕ ಕಾನೂನಿನ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ’ ಎಂದು ದೂರಿದರು.
ಇದನ್ನು ಅಲ್ಲಗಳೆದ ದಾರಕೇಶ್ವರಯ್ಯ ಪರ ವಕೀಲರು ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸಮಯ ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಿತು. ಅಲ್ಲಿಯವರೆವಿಗೂ ಈ ಮೊದಲು ನೀಡಿದ್ದ ಆದೇಶದ ಅನುಸಾರ ದಾರಕೇಶ್ವರಯ್ಯ ಬೇಡ ಜಂಗಮ ಜಾತಿ ಪ್ರಮಾಣಪತ್ರ ಬಳಕೆ ಮಾಡದಂತೆ ವಿಧಿಸಿದ್ದ ನಿರ್ಬಂಧವನ್ನು ವಿಸ್ತರಿಸಿತು. ಅರ್ಜಿದಾರ ಚಂದ್ರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಹಾಜರಾಗಿದ್ದರು. ವಕೀಲೆ ಜಿ.ಎಸ್.ಕಾವ್ಯಶ್ರೀ ವಕಾಲತ್ತು ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.