ಬೆಂಗಳೂರು: ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಶೀಘ್ರವೇ ಪ್ರತ್ಯೇಕ ಇಲಾಖೆ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಮೃತ ಮಹೋತ್ಸವವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಎಂಎಸ್‌ಎಂಇ ವಿಭಾಗವು ವಾಣಿಜ್ಯ ಇಲಾಖೆಯ ಜತೆ ಇದೆ. ವಾಣಿಜ್ಯ ಇಲಾಖೆಗೆ, ಇಲಾಖೆಯ ಕಾರ್ಯದರ್ಶಿಗಳಿಗೆ, ಅಧಿಕಾರಿಗಳು ಕೈಗೆ ಸಿಗುವುದಿಲ್ಲ. ಅವರಿಗೆ ಕೆಲಸ ಹೆಚ್ಚು ಇರುವಂತಿದೆ. ಹೀಗಾಗಿ ಎಂಎಸ್‌ಎಂಇಗಳಿಗೆ ಸಮಯ ನೀಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ತಪ್ಪಿಸಲು ಪ್ರತ್ಯೇಕ ಇಲಾಖೆಯನ್ನೇ ಮಾಡುತ್ತೇನೆ’ ಎಂದರು.
‘ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ಎಂಎಸ್‌ಎಂಇಗಳು ಇವೆ. ಅವು ಒಟ್ಟು 1.85 ಕೋಟಿ ಉದ್ಯೋಗ ನೀಡಿವೆ. ರಾಜ್ಯದ ಆರ್ಥಿಕತೆಗೆ ಈ ಮಟ್ಟದ ಕೊಡುಗೆ ನೀಡುತ್ತಿರುವ ಈ ವಲಯಕ್ಕೆ ಪ್ರತ್ಯೇಕ ಇಲಾಖೆಯ ಅಗತ್ಯವಿದೆ. ಇಲಾಖೆಗೆ ಪ್ರತ್ಯೇಕ ಸಚಿವ, ಸಚಿವಾಲಯ ಮತ್ತು ಕಾರ್ಯದರ್ಶಿಯನ್ನು ನಿಯೋಜನೆ ಮಾಡುತ್ತೇವೆ’ ಎಂದರು.
ಉದ್ಯಮಿಗಳಿಗೆ ತೆರಿಗೆ ಪಾಠ: ‘ರಾಜ್ಯದ ಆರ್ಥಿಕತೆಯಲ್ಲಿ ಮತ್ತು ರಾಷ್ಟ್ರನಿರ್ಮಾಣದಲ್ಲಿ ಎಂಎಸ್‌ಎಂಇಗಳು ಮಹತ್ವದ ಪಾತ್ರವಹಿಸುತ್ತವೆ. ಎಂಎಸ್‌ಎಂಇ ಉದ್ಯಮಿಗಳಾದ ನೀವು ಎಷ್ಟು ತೆರಿಗೆ ಕಟ್ಟುತ್ತಿದ್ದೀರಿ, ಅದರಲ್ಲಿ ನಿಮಗೆಷ್ಟು ವಾಪಸ್ ಬರುತ್ತಿದೆ ಎಂಬುದು ಗೊತ್ತಿದೆಯೇ’ ಎಂದು ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾಸಿಯಾ ಸದಸ್ಯರನ್ನು ಪ್ರಶ್ನಿಸಿದರು.
ಅವರ ಪ್ರಶ್ನೆಗೆ ಯಾವುದೇ ಉತ್ತರ ಬರದಿದ್ದಾಗ, ‘ಉದ್ಯಮ ನಡೆಸುವ ನಿಮಗೇ ಇದು ಗೊತ್ತಿರದಿದ್ದರೆ ಹೇಗೆ? ರಾಜ್ಯವು ಜಿಎಸ್‌ಟಿ, ಆದಾಯ ತೆರಿಗೆ, ಪೆಟ್ರೋಲ್–ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಎಂದು ವಾರ್ಷಿಕ ₹4.50 ಲಕ್ಷ ಕೋಟಿಯನ್ನು ಕೇಂದ್ರಕ್ಕೆ ನೀಡುತ್ತಿದೆ. ಅದರಲ್ಲಿ ನಮಗೆ ವಾಪಸ್ ಬರುವುದು ₹60,000 ಕೋಟಿ ಮಾತ್ರ. ಉದ್ಯಮಿಗಳಾದ ನೀವು ಇದನ್ನು ತಿಳಿದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
‘ನಾವು ಇಲ್ಲಿ ದುಡಿದು ಸಂಪಾದಿಸುವ ತೆರಿಗೆ ಹಣದಲ್ಲಿ ಅರ್ಧದಷ್ಟಾದರೂ ವಾಪಸ್ ಬಂದರೆ, ಎಂಎಸ್‌ಎಂಇಗಳ ಅಭಿವೃದ್ಧಿಗೆ ಹೆಚ್ಚಿನ ಹಣ ಬಳಸಬಹುದು. ಹಣವೇ ಬರದಿದ್ದರೆ ಅಭಿವೃದ್ಧಿ ಹೇಗೆ ಸಾಧ್ಯ. ಈ ಬಗ್ಗೆ ಅವಕಾಶ ಸಿಕ್ಕಾಗಲೆಲ್ಲಾ ಕೇಂದ್ರ ಸರ್ಕಾರವನ್ನು ನೀವು ಪ್ರಶ್ನಿಸಬೇಕು. ನಾವು ಕೇಳಿದರೆ, ಅದಕ್ಕೆ ರಾಜಕೀಯ ಬಣ್ಣ ಕಟ್ಟುತ್ತಾರೆ. ನೀವು ಕೇಳಿದರೆ ಅವರಿಗೆ ಪರಿಸ್ಥಿತಿ ಅರ್ಥವಾಗಬಹುದು’ ಎಂದರು.
‘ನಾವು ಉದ್ಯಮಿಗಳಿಗಾಗಿಯೇ ಇದ್ದೇವೆ’
‘ಉದ್ಯಮಗಳ ಸ್ಥಾಪನೆಗೆ ಅಗತ್ಯವಿರುವ ಎಲ್ಲ ರೀತಿಯ ನೆರವು ಸಹಕಾರವನ್ನು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ನಾವು ಉದ್ಯಮಿಗಳಿಗಾಗಿಯೇ ಇದ್ದೇವೆ. ನೀವು ಸಲ್ಲಿಸಿರುವ ಬೇಡಿಕೆಗಳನ್ನು ಪರಿಶೀಲಿಸುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
‘ಕೈಗಾರಿಕೆಗಳನ್ನು ಬೆಂಗಳೂರಿನಿಂದಾಚೆಗೆ ಕೊಂಡೊಯ್ಯಬೇಕಿದೆ. ಕಾರ್ಮಿಕರ ಲಭ್ಯತೆ ವಿದ್ಯುತ್ ಮತ್ತು ನೀರು ಪೂರೈಕೆ ರಸ್ತೆ ಸಂಪರ್ಕ ಸೇರಿ ಎಲ್ಲದಕ್ಕೂ ಸಂಬಂಧಿಸಿದಂತೆ ನೀವೇ ಕೂತು ಒಂದು ಸೂತ್ರ ಮತ್ತು ಸಾಧ್ಯತೆಗಳನ್ನು ಸಿದ್ದಪಡಿಸಿಕೊಂಡು ಬನ್ನಿ. ಅವುಗಳನ್ನು ಪರಿಶೀಲಿಸಿ ಪರಸ್ಪರ ಚರ್ಚಿಸಿ ಅಂತಿಮ ರೂಪುರೇಷೆ ಸಿದ್ದಪಡಿಸೋಣ. ಸಿದ್ದರಾಮಯ್ಯ ಅವರ ಸರ್ಕಾರ ನಿಮ್ಮ ಜತೆಗೆ ಇದೆ. ನೀವೂ ನಮ್ಮೊಂದಿಗೆ ನಿಲ್ಲಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.