ADVERTISEMENT

ಕೆಲಸದ ಸ್ಥಳದಲ್ಲಿ ಅವಘಡ ಸಂಭವಿಸದಂತೆ ತಡೆಯಲು ಒತ್ತು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 17:34 IST
Last Updated 28 ಸೆಪ್ಟೆಂಬರ್ 2021, 17:34 IST
ಕಾರ್ಯಾಗಾರದಲ್ಲಿ (ಎಡದಿಂದ) ಬಿ.ಕೆ.ಸಾಹು, ಡಿಜಿಯುವಿ ಹಿರಿಯ ಸಲಹೆಗಾರ ಪ್ರೊ.ಕಾರ್ಲ್ ಹೈಂಜ್ ನೋಟೆಲ್, ಡಾ.ಆರ್.ಇಳಂಗೋವನ್, ಐಇಡಿಎಸ್ ನಿರ್ದೇಶಕ ಜಿ.ಆರ್.ಅಕಾದಾಸ್ ಮತ್ತು ಕಾಸಿಯಾ ಆಡಳಿತಾಧಿಕಾರಿ ಪಿ.ಶಶಿಧರ್ ಇದ್ದರು –ಪ್ರಜಾವಾಣಿ ಚಿತ್ರ
ಕಾರ್ಯಾಗಾರದಲ್ಲಿ (ಎಡದಿಂದ) ಬಿ.ಕೆ.ಸಾಹು, ಡಿಜಿಯುವಿ ಹಿರಿಯ ಸಲಹೆಗಾರ ಪ್ರೊ.ಕಾರ್ಲ್ ಹೈಂಜ್ ನೋಟೆಲ್, ಡಾ.ಆರ್.ಇಳಂಗೋವನ್, ಐಇಡಿಎಸ್ ನಿರ್ದೇಶಕ ಜಿ.ಆರ್.ಅಕಾದಾಸ್ ಮತ್ತು ಕಾಸಿಯಾ ಆಡಳಿತಾಧಿಕಾರಿ ಪಿ.ಶಶಿಧರ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯಅವಘಡಗಳು ಸಂಭವಿಸದಂತೆ ತಡೆಯಲು ಹೆಚ್ಚಿನ ಒತ್ತು ನೀಡಲಾಗುತ್ತದೆ. ಈ ಗುರಿ ಸಾಧನೆಯತ್ತಲೇ ಚಿತ್ತ ಹರಿಸಲಾಗಿದೆ’ ಎಂದು ಎಫ್‌ಎಎಸ್‌ಐಎಲ್‌ನ (ಕೇಂದ್ರ ಕಾರ್ಮಿಕ ಸಚಿವಾಲಯ) ವ್ಯವಸ್ಥಾಪಕ ನಿರ್ದೇಶಕಡಾ.ಆರ್‌.ಇಳಂಗೋವನ್‌ ತಿಳಿಸಿದರು.

ಭಾರತ ಸರ್ಕಾರ, ಡಿಜಿಯುವಿ, ಇಂಡೊ ಜರ್ಮನ್‌ ಫೋಕಲ್‌ ಪಾಯಿಂಟ್‌ ಮತ್ತು ಕಾಸಿಯಾ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಎಂಎಸ್‌ಎಂಇ ಕ್ಷೇತ್ರದಲ್ಲಿ ಔದ್ಯೋಗಿಕ ಸುರಕ್ಷತೆ, ಆರೋಗ್ಯ ಹಾಗೂ ಸಾಮಾಜಿಕ ಭದ್ರತೆ’ ಕುರಿತ ಕಾರ್ಯಾಗಾರದಲ್ಲಿ ಮಂಗಳವಾರ ಮಾತನಾಡಿದರು.

‘ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರ ದತ್ತಾಂಶಗಳನ್ನು ಕಲೆಹಾಕಲಾಗುತ್ತಿದೆ. ಎಂಎಸ್‌ಎಂಇ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಉತ್ತೇಜಿಸುವ ಸಲುವಾಗಿ ‘ಪಿಎಂ ಶ್ರಮ್‌’, ‘ವಿಶ್ವ ಕಾರ್ಮಿಕ’ ಹಾಗೂ ‘ರಾಷ್ಟ್ರೀಯ ಪುರಸ್ಕಾರ’‍ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಕೋವಿಡ್‌ ಸಮಯದಲ್ಲಿ ಆನ್‌ಲೈನ್‌ ಮೂಲಕ ಸುರಕ್ಷತಾ ಕ್ರಮಗಳ ಬಗ್ಗೆ ಕಾರ್ಮಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ’ ಎಂದರು.

ADVERTISEMENT

ನವದೆಹಲಿಯ ಇಂಡೊ ಜರ್ಮನ್‌ ಫೋಕಲ್‌ ಪಾಯಿಂಟ್‌ನ ನಿರ್ದೇಶಕ ಬಿ.ಕೆ.ಸಾಹು ‘ಕೋವಿಡ್‌ ಸಮಯದಲ್ಲಿ ಉದ್ಯೋಗಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತ ಹೆಚ್ಚಿನ ಗಮನಹರಿಸಬೇಕು. ಇದಕ್ಕಾಗಿ ರಾಷ್ಟ್ರೀಯ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ನೀತಿ ಅನುಷ್ಠಾನಗೊಳಿಸುವುದು ಅಗತ್ಯ. ದೇಶದಲ್ಲಿ 6 ಕೋಟಿ ಜನ ಎಂಎಸ್‌ಎಂಇ ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ದೇಶದ ಆರ್ಥಿಕತೆಯ ಬೆಳವಣಿಗೆಗೆ ಅವರ ಕೊಡುಗೆಯೂ ಇದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿರುವ ಸುಮಾರು 1.8 ಕೋಟಿ ಅಸಂಘಟಿತ ಕಾರ್ಮಿಕರ ಮಾಹಿತಿಯನ್ನು ಇ–ಶ್ರಮ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಕ್ಷೌರಿಕರು, ಮೆಕ್ಯಾನಿಕ್‌ ಹೀಗೆ ಅನೇಕ ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ₹2,100 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದನ್ನು ಅರ್ಹರಿಗೆ ತಲುಪಿಸುವ ಕೆಲಸ ನಡೆಯುತ್ತಿದೆ’ ಎಂದು ರಾಜ್ಯ ಕಾರ್ಮಿಕ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ.ಮಂಜುನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.