ADVERTISEMENT

ಎಂಎಸ್‌ಪಿ ಎಲ್ಲಿದೆ ತೋರಿಸಿ: ಸಂಸದ ಪ್ರತಾಪ ಸಿಂಹ ಪ್ರಶ್ನೆ

ಸಂಸದ ಪ್ರತಾಪಸಿಂಹ ಕಚೇರಿ ಎದುರು ರಾಗಿ, ಭತ್ತ ರಾಶಿ ಹಾಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 19:30 IST
Last Updated 12 ಏಪ್ರಿಲ್ 2022, 19:30 IST
ಮೈಸೂರಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಬಂದ ಸಂಸದ ಪ್ರತಾಪಸಿಂಹ ಅವರಿಗೆ ಎಂಎಸ್‌ಪಿ ಕುರಿತು ದನಿ ಎತ್ತುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಯೋಗೇಂದ್ರ ಯಾದವ್‌ ಆಗ್ರಹಿಸಿದರು. ದೇವನೂರ ಮಹಾದೇವ, ಎಸ್‌.ಆರ್‌.ಹಿರೇಮಠ, ಬಡಗಲಪುರ ನಾಗೇಂದ್ರ, ಬೈಯಾರೆಡ್ಡಿ, ಚಾಮರಸ ಮಾಲಿಪಾಟೀಲ, ಗುರುಪ್ರಸಾದ್ ಕೆರಗೋಡು ಇದ್ದಾರೆ
ಮೈಸೂರಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಬಂದ ಸಂಸದ ಪ್ರತಾಪಸಿಂಹ ಅವರಿಗೆ ಎಂಎಸ್‌ಪಿ ಕುರಿತು ದನಿ ಎತ್ತುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಯೋಗೇಂದ್ರ ಯಾದವ್‌ ಆಗ್ರಹಿಸಿದರು. ದೇವನೂರ ಮಹಾದೇವ, ಎಸ್‌.ಆರ್‌.ಹಿರೇಮಠ, ಬಡಗಲಪುರ ನಾಗೇಂದ್ರ, ಬೈಯಾರೆಡ್ಡಿ, ಚಾಮರಸ ಮಾಲಿಪಾಟೀಲ, ಗುರುಪ್ರಸಾದ್ ಕೆರಗೋಡು ಇದ್ದಾರೆ   

ಮೈಸೂರು: ಕೃಷಿ ಉತ್ಪನ್ನಗಳಿಗೆ ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಸಂಯುಕ್ತ ಹೋರಾಟ–ಕರ್ನಾಟಕದ ಪ್ರಮುಖರು ನಗರದಲ್ಲಿ ಸಂಸದ ಪ್ರತಾಪಸಿಂಹ ಅವರ ಕಚೇರಿ ಎದುರುಮಂಗಳವಾರ ಭತ್ತ ಹಾಗೂ ರಾಗಿ ರಾಶಿ ಹಾಕಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಯೋಗೇಂದ್ರ ಯಾದವ್‌ , ‘ಕನಿಷ್ಠ ಬೆಂಬಲ ಬೆಲೆ ಎಲ್ಲಿದೆ ತೋರಿಸಿ’ ಎಂದು ಆಗ್ರಹಿಸಿದರು.

'ಸೀತೆಯ ಪತಿ ರಾಮನ ಹೆಸರು ಹೇಳಿಕೊಂಡು ಪ್ರಧಾನಿ ಮೋದಿ ಅವರು ನೀತಾಳ ಪತಿ ಮುಖೇಶ್‌ ಅಂಬಾನಿ ಅವರಿಗೆ ಕೆಲಸ ಮಾಡಿಕೊಡುತ್ತಿದ್ದಾರೆ. ರೈತರ ಹೆಸರಿನಲ್ಲಿ ಬಿಜೆಪಿ ಸರ್ಕಾರ ದರೋಡೆ ನಡೆಸುತ್ತಿದೆ. ನ್ಯಾಯಯುತ ಎಂಎಸ್‌ಪಿ ಸಿಗುವವರೆಗೆ ದೇಶದಾದ್ಯಂತ ಹೋರಾಟ ಮುಂದುವರಿಯಲಿದೆ’ ಎಂದರು.

ADVERTISEMENT

'ಕನಿಷ್ಠ ಬೆಂಬಲ ಬೆಲೆಯ ಹಿಸಾಬ್ (ಲೆಕ್ಕ) ಕೇಳಿದರೆ ಹಿಜಾಬ್ ತೋರಿಸಿ ನಿಜವಾದ ವಿಚಾರಗಳನ್ನು ಕೇಂದ್ರ ಸರ್ಕಾರ ಮರೆಮಾಚುತ್ತಿದೆ. ರಾಮನವಮಿ ದಿನವೇ ರಾಮನ ಹೆಸರಿನಲ್ಲಿ ದೇಶದ ವಿವಿಧೆಡೆ ಮುಸ್ಲಿಮರು ಹಾಗೂ ಮಸೀದಿಗಳ ಮೇಲೆ ದಾಳಿ ನಡೆಸಲಾಗಿದೆ. ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ಜೆಎನ್‌ಯುನಲ್ಲಿ ವಿದ್ಯಾರ್ಥಿಗಳು ಮಾಂಸಾಹಾರ ಸೇವಿಸಬಾರದು ಎನ್ನುತ್ತಿದ್ದಾರೆ. ರೈತರ, ಜನಸಾಮಾನ್ಯರ ಸಮಸ್ಯೆಗಳನ್ನು ಮುಚ್ಚಿಹಾಕಲು ಪ್ರಯತ್ನ ನಡೆಸಿದ್ದಾರೆ' ಎಂದು ಆರೋಪಿಸಿದರು.

'ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಿ, ಎಲ್ಲಾ ಬೆಳೆಗಳಿಗೆ ವಿಸ್ತರಿಸಬೇಕು. ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿ ಮಾಡಿ. ಕೃಷಿ ಪರಿಕರಗಳಿಗೂ ಗರಿಷ್ಠ ಮಾರಾಟ ದರ (ಎಂಆರ್‌ಪಿ) ನಿಗದಿಪಡಿಸಬೇಕು' ಎಂದು ಆಗ್ರಹಿಸಿದರು.

ಸಂಸದ ಪ್ರತಾಪಸಿಂಹ ಅವರು ಸ್ಥಳಕ್ಕೆ ಬಂದು ಮನವಿ ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.