ADVERTISEMENT

ಮುಡಾ: 19 ವರ್ಷಗಳ ಅಕ್ರಮಗಳ ವಿಚಾರಣೆ

ಎಚ್‌ಡಿಕೆ ಅವಧಿಯಿಂದ ಸಿದ್ದರಾಮಯ್ಯ ಅವರ ಎರಡನೇ ಅವಧಿವರೆಗೂ ತನಿಖೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 23:30 IST
Last Updated 24 ಜುಲೈ 2024, 23:30 IST
ಮುಡಾ ಕಚೇರಿ
ಮುಡಾ ಕಚೇರಿ   

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 2006ರಿಂದ 2024ರ ಜುಲೈ 15ರವರೆಗೂ ನಡೆದಿರುವ ಭೂಸ್ವಾಧೀನ, ಬಡಾವಣೆಗಳ ನಿರ್ಮಾಣ, ನಿವೇಶನ ಹಂಚಿಕೆ, ಪರಿಹಾರ ವಿತರಣೆ ಮತ್ತು ಬದಲಿ ನಿವೇಶನಗಳ ಹಂಚಿಕೆ ಕುರಿತು ನಿವೃತ್ತ ನ್ಯಾಯಮೂರ್ತಿ ಪಿ.ಎನ್‌. ದೇಸಾಯಿ ನೇತೃತ್ವದ ಆಯೋಗ ವಿಚಾರಣೆ ನಡೆಸಲಿದೆ.

ಎಚ್‌.ಡಿ. ಕುಮಾರಸ್ವಾಮಿ, ಬಿ.ಎಸ್‌. ಯಡಿಯೂರಪ್ಪ (ಎರಡು ಅವಧಿ), ಡಿ.ವಿ. ಸದಾನಂದ ಗೌಡ, ಜಗದೀಶ ಶೆಟ್ಟರ್‌, ಸಿದ್ದರಾಮಯ್ಯ (ಎರಡು ಅವಧಿ) ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಪ್ರಾಧಿಕಾರದಲ್ಲಿ ನಡೆದಿರಬಹುದಾದ ಅವ್ಯವಹಾರಗಳ ಕುರಿತು ವಿಚಾರಣೆ ನಡೆಸಿ, ವರದಿ ಸಲ್ಲಿಸುವ ಜವಾಬ್ದಾರಿಯನ್ನು ಆಯೋಗಕ್ಕೆ ವಹಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾದಿಂದ ಬದಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಬಂದ ಕಾರಣದಿಂದ ವಿಚಾರಣಾ ಆಯೋಗ ನೇಮಿಸಿ ಜುಲೈ 14ರಂದು ಆದೇಶ ಹೊರಡಿಸಲಾಗಿತ್ತು. ಆಯೋಗದ ಕಾರ್ಯವ್ಯಾಪ್ತಿ ಮತ್ತು ಷರತ್ತುಗಳನ್ನು ಸ್ಪಷ್ಟಪಡಿಸಿ ಗೃಹ ಇಲಾಖೆ ಬುಧವಾರ ಅಧಿಸೂಚನೆ ಹೊರಡಿಸಿದೆ.

ADVERTISEMENT

2006ರಿಂದ 2024ರ ಜುಲೈ 15ರವರೆಗೆ ಮುಡಾ ನಿರ್ಮಿಸಿರುವ ಬಡಾವಣೆಗಳು, ಭೂಸ್ವಾಧೀನ, ಭೂಸ್ವಾಧೀನ ಪ್ರಕ್ರಿಯೆಯಿಂದ ಜಮೀನುಗಳನ್ನು ಕೈಬಿಟ್ಟಿರುವುದು, ಅಂತಹ ಜಮೀನುಗಳನ್ನು ಪುನಃ ಬಡಾವಣೆ ನಿರ್ಮಾಣಕ್ಕೆ ಬಳಸಿಕೊಂಡಿರುವುದು, ಭೂಸ್ವಾಧೀನ ಪ್ರಕ್ರಿಯೆ ನಡೆಸದೇ ಖಾಸಗಿ ಜಮೀನುಗಳನ್ನು ಬಳಸಿಕೊಂಡಿರುವುದು, ಅಂತಹ ಜಮೀನುಗಳ ಮಾಲೀಕರಿಗೆ ಪರಿಹಾರ ವಿತರಿಸಲು ಅನುಸರಿಸಿರುವ ವಿಧಾನಗಳ ಕುರಿತು ವಿಚಾರಣೆ ನಡೆಸುವಂತೆ ತಿಳಿಸಲಾಗಿದೆ.

ನಿವೇಶನ ರೂಪದ ಪರಿಹಾರ ವಿತರಣೆಯಲ್ಲಿ ಕಾನೂನು ಪಾಲನೆ ಕುರಿತೂ ವಿಚಾರಣೆ ನಡೆಸಬೇಕು. 19 ವರ್ಷಗಳ ಅವಧಿಯಲ್ಲಿ ಮುಡಾದಲ್ಲಿ ನಡೆದಿರಬಹುದಾದ ಎಲ್ಲ ಅಕ್ರಮಗಳನ್ನು ಗುರುತಿಸಿ, ಸೂಕ್ತ ಸಲಹೆಗಳೊಂದಿಗೆ ವರದಿ ಸಲ್ಲಿಸಬೇಕು ಎಂದು ಆಯೋಗಕ್ಕೆ ಸೂಚಿಸಲಾಗಿದೆ.

ಅಕ್ರಮವಾಗಿ ನಿವೇಶನ ಪಡೆದಿರುವವರು, ಬದಲಿ ನಿವೇಶನ ಪಡೆದಿರುವವರನ್ನು ಗುರುತಿಸಿ ಪಟ್ಟಿ ಸಲ್ಲಿಸಬೇಕು. ಅಂತಹ ನಿವೇಶಗಳನ್ನು ಪುನಃ ಮುಡಾ ಸ್ವಾಧೀನಕ್ಕೆ ಪಡೆಯಲು ಶಿಫಾರಸುಗಳನ್ನು ನೀಡಬೇಕು. ಅಕ್ರಮವಾಗಿ ನಿವೇಶನ, ಬದಲಿ ನಿವೇಶನ ಪಡೆದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆಯೂ ಸಲಹೆ ನೀಡಬೇಕು ಎಂದು ಗೃಹ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಭೂಸ್ವಾಧೀನ ಪ್ರಕ್ರಿಯೆ ಇಲ್ಲದೆ ಮುಡಾ ವಶಕ್ಕೆ ಪಡೆದ ಜಮೀನುಗಳ ಮಾಲೀಕರಿಗೆ ಪರಿಹಾರ ನೀಡಲು ಪ್ರಾಧಿಕಾರ ಕೈಗೊಂಡ ನಿರ್ಣಯಗಳು ಕಾನೂನಿನ ಪ್ರಕಾರ ಸಿಂಧುವಾಗುತ್ತವೆಯೆ? ಅಥವಾ ಇಲ್ಲವೆ ಎಂಬುದನ್ನೂ ಪರಿಶೀಲಿಸುವ ಹೊಣೆಯನ್ನು ಆಯೋಗಕ್ಕೆ ನೀಡಲಾಗಿದೆ. ನಾಗರಿಕ ಸೌಲಭ್ಯಕ್ಕೆ (ಸಿ.ಎ) ಮೀಸಲಾದ ನಿವೇಶನಗಳ ಹಂಚಿಕೆ ಬಗ್ಗೆಯೂ ವಿಚಾರಣೆ ನಡೆಸುವಂತೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.