ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಬುಧವಾರವೂ ಜಾರಿ ನಿರ್ದೇಶನಾಲಯದ (ಇ.ಡಿ.) ವಿಚಾರಣೆಗೆ ಹಾಜರಾಗಿಲ್ಲ. ಸೋಮವಾರದಿಂದ ನಾಪತ್ತೆಯಾಗಿರುವ ಅವರು, ಹೊರ ರಾಜ್ಯಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ.
ನಗರದ ಬಾಣಸವಾಡಿಯಲ್ಲಿರುವ ದಿನೇಶ್ ಕುಮಾರ್ ಅವರ ಮನೆಯಲ್ಲಿ ಶೋಧ ನಡೆಸಲು ಇ.ಡಿ. ಅಧಿಕಾರಿಗಳು ಹೋಗಿದ್ದರು. ಆದರೆ, ದಿನೇಶ್ ಅವರು ಮನೆಯಲ್ಲಿರಲಿಲ್ಲ. ಶೋಧ ಕಾರ್ಯ ಮುಗಿಸಿ ವಾಪಸಾಗಿದ್ದ ತನಿಖಾ ತಂಡದ ಅಧಿಕಾರಿಗಳು, ಮಂಗಳವಾರ ಪುನಃ ಅವರ ಮನೆಗೆ ಹೋಗಿ ಪರಿಶೀಲಿಸಿದ್ದರು. ಆಗಲೂ ದಿನೇಶ್ ಮನೆಗೆ ಬಂದಿರಲಿಲ್ಲ.
‘ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇ.ಡಿ. ಅಧಿಕಾರಿಗಳು ದಿನೇಶ್ ಅವರ ಮನೆಯ ಗೋಡೆಗೆ ನೋಟಿಸ್ ಅಂಟಿಸಿ ಬಂದಿದ್ದರು. ಬುಧವಾರ ಕೂಡ ಅವರು ಇ.ಡಿ. ಅಧಿಕಾರಿಗಳ ಎದುರು ಹಾಜರಾಗಿಲ್ಲ. ಸೋಮವಾರದಿಂದಲೇ ಅವರು ನಾಪತ್ತೆಯಾಗಿದ್ದು, ನೆರೆಯ ರಾಜ್ಯಕ್ಕೆ ತೆರಳಿರುವ ಅನುಮಾನ ಇದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.