ADVERTISEMENT

ದಲಿತರ ನಿವೇಶನ ಕಬಳಿಸಿದ ಸಿದ್ದರಾಮಯ್ಯ: ಎಚ್‌ಡಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 16:06 IST
Last Updated 14 ಸೆಪ್ಟೆಂಬರ್ 2024, 16:06 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ದಲಿತ ವ್ಯಕ್ತಿಯೊಬ್ಬರಿಗೆ ಹಂಚಿಕೆಯಾಗಿದ್ದ ನಿವೇಶನವನ್ನು ಕಬಳಿಸಿ, ಸಿದ್ದರಾಮಯ್ಯ ಮನೆ ಕಟ್ಟಿಸಿದ್ದರು. ಅವರ ಮತ್ತು ಅವರ ಕುಟುಂಬದ ಹಗರಣಗಳು ಒಂದೆರಡಲ್ಲ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ಜೆಡಿಎಸ್‌ ಕಚೇರಿಯಲ್ಲಿ ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ದಲಿತ ಅಂಗವಿಕಲ ವ್ಯಕ್ತಿಯೊಬ್ಬರಿಗೆ 10,000 ಚದರ ಅಡಿ ನಿವೇಶನ ಮಂಜೂರು ಮಾಡಿದ್ದ ಮುಡಾ, ಅವರಿಂದ ₹24,000 ಕಟ್ಟಿಸಿಕೊಂಡಿತ್ತು. ಆ ನಿವೇಶನಕ್ಕೆ ಸಂಬಂಧಿಸಿದಂತೆ ಸಾಕಮ್ಮ ಎಂಬುವವರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿದ್ದ ಸಿದ್ದರಾಮಯ್ಯ ಅವರು ಮನೆ ನಿರ್ಮಿಸಿದ್ದರು’ ಎಂದು ಆಪಾದಿಸಿದರು.

‘ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದಾಗ ಈ ಭೂಕಬಳಿಕೆ ಮಾಡಿದ್ದಾರೆ. ಇದು ಬಹಿರಂಗವಾಗುತ್ತದೆ ಎಂದು ಆ ಮನೆಯನ್ನು ಮಾರಾಟ ಮಾಡುವ ನಾಟಕ ಆಡಿದರು. ಆದರೆ ಮನೆಯನ್ನು ಯಾರಿಗೆ ಮಾರಿದರು? ನಿಜಕ್ಕೂ ಮನೆ ಮಾರಿದ್ದಾರೆಯೇ ಎಂಬುದನ್ನು ತೆಗೆದು ನೋಡಿದರೆ, ಅದು ಇನ್ನೊಂದು ಹಗರಣವಾಗುತ್ತದೆ’ ಎಂದರು.

ADVERTISEMENT

‘ಜನರಿಗೆ ಇದೆಲ್ಲಾ ಮರೆತುಹೋಗಿರಬಹುದು. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳೂ ನನ್ನ ಬಳಿ ಇವೆ. ಅಗತ್ಯವಿದ್ದರೆ ಈ ಎಲ್ಲ ದಾಖಲೆಗಳನ್ನು ಕೊಡುತ್ತೇನೆ’ ಎಂದರು.

‘ನಾನು ರೈತರಿಗೆ ಏನು ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ದು ನಾನಲ್ಲವೇ? ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವನ್ನು ಪೂರ್ಣ ಪ್ರಮಾಣದಲ್ಲಿ ನೀಡಿದ್ದು ನಾನು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.