ADVERTISEMENT

ಮುದನೂರಿನಲ್ಲಿ ನೀರಿಗೆ ವಿಷ: ಇಬ್ಬರ ಬಂಧನ

ಪಿಡಿಒ ಮೇಲಿನ ದ್ವೇಷಕ್ಕೆ ನೀರಿಗೆ ಕ್ರಿಮಿನಾಶಕ ಬೆರೆಸಿದ ಪಂಪ್ ಆಪರೇಟರ್

​ಪ್ರಜಾವಾಣಿ ವಾರ್ತೆ
Published 14 ಜನವರಿ 2019, 20:25 IST
Last Updated 14 ಜನವರಿ 2019, 20:25 IST
ಮೌನೇಶ, ಶಾಂತಗೌಡ
ಮೌನೇಶ, ಶಾಂತಗೌಡ   

ಯಾದಗಿರಿ: ಹುಣಸಗಿ ತಾಲ್ಲೂಕಿನ ಮುದನೂರು ಬಾವಿಯಿಂದ ಕುಡಿಯುವ ನೀರು ಪೂರೈಸುವ ವಾಲ್ವ್‌ಗೆ ಕ್ರಿಮಿನಾಶಕ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋಮವಾರ ಪಂಪ್‌ ಆಪರೇಟರ್ ಮೌನೇಶ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಾಂತಗೌಡ ಅವರನ್ನು ಬಂಧಿಸಿದ್ದಾರೆ.

‘ಪಿಡಿಒ ಸಿದ್ರಾಮಪ್ಪ ಬರಡೋಲ ಅವರಿಗೆ ಅರಕೇರಾ (ಜೆ) ಗ್ರಾಮದ ಶಾಂತಗೌಡ ಉದ್ಯೋಗ ಖಾತ್ರಿ ಯೋಜನೆಯಡಿ ಗುತ್ತಿಗೆ ಕಾಮಗಾರಿ ನೀಡುವಂತೆ ಕೇಳಿದ್ದರು. ಆದರೆ, ಪಿಡಿಒ ಸ್ಪಂದಿಸಿರಲಿಲ್ಲ. ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಅದೇ ಗ್ರಾಮದ ಮೌನೇಶನಿಗೆ ಪಿಡಿಒ ಏಪ್ರಿಲ್‌ನಿಂದಲೂ ವೇತನ ನೀಡಿರಲಿಲ್ಲ. ಪಿಡಿಒ ಮೇಲೆ ಸೇಡು ತೀರಿಸಿಕೊಳ್ಳಲು ಇಬ್ಬರೂ ಯೋಜನೆ ರೂಪಿಸಿ ಕೃತ್ಯ ಎಸಗಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪಿಡಿಒ ಸಿದ್ರಾಮಪ್ಪ ಅವರನ್ನು ವರ್ಗಾವಣೆ ಮಾಡಿಸುವುದು ಆರೋಪಿಗಳ ಉದ್ದೇಶವಾಗಿತ್ತು. ಈ ಕಾರಣಕ್ಕಾಗಿಯೇ ಮೌನೇಶ ಹಾಗೂ ಶಾಂತಗೌಡ ಇಬ್ಬರೂ ಜ.6ರಂದು ಭೇಟಿಯಾಗಿ ಯೋಜನೆ ರೂಪಿಸಿದ್ದರು. ಜ.8ರಂದು ರಾತ್ರಿ ಭೇಟಿಯಾದರು. ಆ ಸಂದರ್ಭದಲ್ಲಿ ಶಾಂತಗೌಡ ಹುಣಸಗಿಯಲ್ಲಿ ಖರೀದಿಸಿ ತಂದಿದ್ದ ‘ಹೈವಾರ್’ ಹೆಸರಿನ ಕೀಟನಾಶಕವನ್ನು ಮೌನೇಶ್‌ಗೆ ನೀಡಿದ್ದ. ನಂತರ ಒಂದು ಲೀಟರ್‌ನಷ್ಟು ಕ್ರಿಮಿನಾಶಕವನ್ನು ವಾಲ್ವ್‌ಗೆ ಬೆರೆಸಿದ್ದ’ ಎಂದು ವಿವರ ನೀಡಿದರು.

ADVERTISEMENT

ಕುಡಿದ ಮತ್ತಿನಲ್ಲಿ ತಾಯಿ ಮರೆತ

‘ಮನೆಯವರಿಗೆ ನೀರು ಕುಡಿಯದಂತೆ ಹೇಳಿದರಾಯಿತು ಎಂದುಕೊಂಡಿದ್ದ ಮೌನೇಶ, ಕುಡಿದ ಮತ್ತಿನಲ್ಲಿ ಮರೆತು ಅಲ್ಲೇ ಮಲಗಿದ್ದ. ನಂತರ ಎಚ್ಚರವಾದಾಗ ತಾಯಿ ಆಗಲೇ ನೀರು ಕುಡಿದು ಅಸ್ವಸ್ಥರಾಗಿದ್ದರು. ನಂತರ ಇಡೀ ಊರಿಗೆ ಸುದ್ದಿ ಮುಟ್ಟಿಸಿದ್ದಾನೆ. ತನ್ನ ಮೇಲೆ ಊರಿನ ಜನರಿಗೆ ಅನುಮಾನ ಬಾರದಿರುವಂತೆ ನಟಿಸಿದ್ದಾನೆ. ನೀರು ಕುಡಿಯದಿದ್ದರೂ ಆತನೂ ಚಿಕಿತ್ಸೆಗೆ ದಾಖಲಾಗಿದ್ದ’ ಎಂದು ಎಸ್‌ಪಿ ಹೇಳಿದರು.

‘ವಿಷಯುಕ್ತ ನೀರು ಸೇವಿಸಿ ವೃದ್ಧೆ ಹೊನ್ನಮ್ಮ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಮರಣೋತ್ತರ ವರದಿ ಬಂದ ನಂತರ ಪರಿಶೀಲಿಸಿ ಇನ್ನಷ್ಟು ಸೆಕ್ಷನ್‌ ಸೇರಿಸಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.