
ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳ ವೈದ್ಯರು ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ (ಒಪಿಡಿ) ವಿಭಾಗದಲ್ಲಿ ಮಾತ್ರ ಕೆಲಸ ಮಾಡಬಹುದು ಎಂದು ಆರೋಗ್ಯ ಇಲಾಖೆ ನಿರ್ಬಂಧ ವಿಧಿಸಿದೆ.
ಈ ಸಂಬಂಧ ಪರಿಷ್ಕೃತ ಆದೇಶವನ್ನು ಇಲಾಖೆ ಹೊರಡಿಸಿದೆ.
ಸರ್ಕಾರಿ ಆದೇಶಗಳ ಪ್ರಕಾರ, ಸರ್ಕಾರಿ ವೈದ್ಯರು ನಿಗದಿತ ಅವಧಿ ಬಳಿಕ ಖಾಸಗಿ ವೈದ್ಯಕೀಯ ವ್ಯವಸ್ಥೆಯಡಿ ಕಾರ್ಯನಿರ್ವಹಿಸಲು ಅವಕಾಶವಿದ್ದು, ಈ ಕೆಲಸವು ಸರ್ಕಾರಿ ಆಸ್ಪತ್ರೆಯಲ್ಲಿನ ಕರ್ತವ್ಯಗಳಿಗೆ ಅಡ್ಡಿಯಾಗಬಾರದೆಂಬ ನಿಯಮವಿದೆ.
ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳ ಚಿಕಿತ್ಸೆಯಲ್ಲಿ ತೊಡಗುವುದರಿಂದ, ಸರ್ಕಾರಿ ಆಸ್ಪತ್ರೆಗಳಲ್ಲಿ ಅವರ ಕಾರ್ಯನಿರ್ವಹಣೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಆದ್ದರಿಂದ, ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳ ಒಪಿಡಿ ವಿಭಾಗದಲ್ಲಿ ಮಾತ್ರ ಕಾರ್ಯನಿರ್ವಹಿಸಬಹುದಾಗಿದೆ. ಅದು ಕೂಡ ನಿಯಮಿತ ಕರ್ತವ್ಯಗಳಿಗೆ ಅಡ್ಡಿಯಾಗದಂತೆ, ಕರ್ತವ್ಯದ ಸಮಯದ ಬಳಿಕ ತೆರಳಬೇಕು. ಆ ವಿವರಗಳನ್ನು ಇಲಾಖೆ ಅಧಿಕಾರಿಗಳಿಗೆ ಒದಗಿಸಬೇಕು. ಈ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಕಾನೂನಿನಡಿ ಶಿಸ್ತು ಕ್ರಮಕ್ಕೆ ಒಳಪಡಿಸಲಾಗುತ್ತದೆ ಎಂದು ಎಚ್ಚರಿಸಿದೆ.
ಖಾಸಗಿ ವೈದ್ಯಕೀಯ ವ್ಯವಸ್ಥೆಯಡಿ ಕಾರ್ಯನಿರ್ವಹಣೆ ಕಾರಣ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಆರೈಕೆ ನಿರ್ಲಕ್ಷಿಸಿರುವುದು, ಇದರಿಂದ ರೋಗಿ ಮೃತಪಟ್ಟಿರುವ ಬಗ್ಗೆ ಲೋಕಾಯುಕ್ತರು ಈ ಹಿಂದೆ ಗಮನಸೆಳೆದಿದ್ದರು. ಆಡಳಿತ ಸುಧಾರಣಾ ಆಯೋಗವು ತನ್ನ ವರದಿಯಲ್ಲಿ ಸರ್ಕಾರಿ ವೈದ್ಯರ ಖಾಸಗಿ ಕಾರ್ಯನಿರ್ವಹಣೆ ನಿಯಂತ್ರಿಸಲು ಶಿಫಾರಸು ಮಾಡಿತ್ತು. ಕೇರಳದಲ್ಲಿ ಇದೇ ರೀತಿ ನಿರ್ಬಂಧ ಜಾರಿಯಲ್ಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರಿ ವೈದ್ಯರು ಕರ್ತವ್ಯದ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಇಲಾಖೆಗೆ ಈ ಹಿಂದೆ ದೂರುಗಳು ಸಲ್ಲಿಕೆಯಾಗಿದ್ದವು. ಆದ್ದರಿಂದ ಇಲಾಖೆ ಈ ಬಗ್ಗೆ ಕ್ರಮ ಕೈಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.