ADVERTISEMENT

ಪೌರ ಕಾರ್ಮಿಕರು, ಚಾಲಕರು ಕಾಯಂ | ಮೇ 1ರಂದು ನೇಮಕಾತಿ ಪತ್ರ: ಸಿದ್ದರಾಮಯ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 15:45 IST
Last Updated 7 ಏಪ್ರಿಲ್ 2025, 15:45 IST
<div class="paragraphs"><p>ಪೌರಕಾರ್ಮಿಕರಿಗೆ ಅರಿವು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು</p></div>

ಪೌರಕಾರ್ಮಿಕರಿಗೆ ಅರಿವು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು

   

ಪ್ರಜಾವಾಣಿ ಚಿತ್ರ- ಕಿಶೋರ್ ಕುಮಾರ್ ಬೋಳಾರ್

ಬೆಂಗಳೂರು: ‘ಪೌರಕಾರ್ಮಿಕರನ್ನು ಕಾಯಂಗೊಳಿಸಿ, ಮೇ 1ರ ಕಾರ್ಮಿಕ ದಿನಾಚರಣೆಯಿಂದ ನೇಮಕಾತಿ ಪತ್ರಗಳನ್ನು ನೀಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

ಸೋಮವಾರ ಇಲ್ಲಿ ನಡೆದ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಬೆಳ್ಳಿ ಮಹೋತ್ಸವ ಹಾಗೂ ಪೌರಕಾರ್ಮಿಕರಿಗೆ ಅರಿವು ಕಾರ್ಯಕ್ರಮದಲ್ಲಿ ಅವರು ಈ ಭರವಸೆ ನೀಡಿದರು.

‘ಪೌರ ಕಾರ್ಮಿಕರ ಜೊತೆಗೆ ಚಾಲಕರನ್ನೂ ಗುತ್ತಿಗೆಯಿಂದ ತೆಗೆದು ಕಾಯಂ‌ ಮಾಡಲಾಗುವುದು. ಪೌರ ಕಾರ್ಮಿಕರಿಗೆ ನಗದು ರಹಿತ ಆರೋಗ್ಯ ಕಾರ್ಡ್ ನೀಡಲಾಗುವುದು‌. ಪೌರಕಾರ್ಮಿಕರ ಸಿಂಧುತ್ವದ ಸಮಸ್ಯೆ ಬಗೆಹರಿಸಲಾಗುವುದು. ಪ್ರತಿ ವರ್ಷ ಒಂದು ಸಾವಿರ ಪೌರಕಾರ್ಮಿಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ಪೌರಕಾರ್ಮಿಕ ಸಮುದಾಯವೂ ವಿಶ್ವ ಪ್ರಜ್ಞೆ ಬೆಳೆಸಿಕೊಳ್ಳಬೇಕು’ ಎಂದರು.

‘ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಲಿ, ಪೌರಕಾರ್ಮಿಕರಾಗಲಿ ಯಾವುದೇ ವ್ಯತ್ಯಾಸವಿಲ್ಲ. ಎಲ್ಲ ಸೇವೆಗಳೂ ಪವಿತ್ರವೇ. ನಿಮ್ಮನ್ನು ಅವಮಾನಕಾರಿಯಾಗಿ ನಡೆಸಿಕೊಳ್ಳುವುದು ಸರಿಯಲ್ಲ. ನಿಮಗೂ ವೃತ್ತಿಗೌರವ, ಘನತೆ ಸಿಗಬೇಕು. ಇದಕ್ಕಾಗಿ ಸೇವೆ ಕಾಯಂ ಮಾಡಲಾಗುವುದು’ ಎಂದರು.

‘ನೀವೆಲ್ಲಾ ಕಷ್ಟಪಟ್ಟು ಶುಚಿತ್ವದ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಮಕ್ಕಳೂ ಇದೇ ಕೆಲಸ ಮಾಡಬಾರದು. ಮಕ್ಕಳು ವಿದ್ಯಾವಂತರಾಗಿ, ಸ್ವಾಭಿಮಾನಿಗಳಾಗಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು. ಪೌರಕಾರ್ಮಿಕರ ಸಂಬಳವನ್ನು ₹7 ಸಾವಿರದಿಂದ ₹17 ಸಾವಿರಕ್ಕೆ ಏರಿಸಿದ್ದು ಇದೇ ಸಿದ್ದರಾಮಯ್ಯ’ ಎಂದು ಹೇಳಿದರು.

‘ಪೌರಕಾರ್ಮಿಕರ ಸಂಘಟನೆ ಮತ್ತು ಹೋರಾಟದಲ್ಲಿ ನಾರಾಯಣ್ ಅವರ ಪಾತ್ರ ದೊಡ್ಡದಿದೆ. ಪೌರಕಾರ್ಮಿಕ‌ ಸಮುದಾಯದಿಂದ ಬಂದು ಮೇಯರ್ ಆದವರಲ್ಲಿ ನಾರಾಯಣ್ ಅವರು ಮೊದಲಿಗರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

₹730 ಕೋಟಿ ಮೀಸಲು:

‘ಈ ಬಾರಿಯ ಬಿಬಿಎಂಪಿ ಬಜೆಟ್‌ನಲ್ಲಿ ಪೌರಕಾರ್ಮಿಕರ ವೇತನಕ್ಕೆ ₹500 ಕೋಟಿ, ಪಿಂಚಣಿಗೆ ₹107 ಕೋಟಿ ಮೀಸಲಿಡಲಾಗಿದೆ. ₹6 ಸಾವಿರ ಪಿಂಚಣಿ ನೀಡುವ ಯೋಜನೆ ತರಲಾಗಿದೆ. ಒಟ್ಟಾರೆ, ಪೌರಕಾರ್ಮಿಕರ ಕಲ್ಯಾಣಕ್ಕಾಗಿ ₹730 ಕೋಟಿ ಮೀಸಲಿಟ್ಟಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

‘ಕಾಯಂ ಆದಾಕ್ಷಣ ₹50 ಸಾವಿರಕ್ಕೆ ವೇತನ’
‘ಪೌರ ಕಾರ್ಮಿಕರೇ ನಿಮ್ಮ ಕೆಲಸ ಕಾಯಂ ಆದ ತಕ್ಷಣ ಸಂಬಳ ₹50 ಸಾವಿರ ಮುಟ್ಟುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಸಮಾರಂಭದಲ್ಲಿ ಮಾತನಾಡಿದ ಅವರು ‘ಇಂದೇ ನಿಮಗೆ ನೇಮಕಾತಿ ಪತ್ರ ನೀಡಬೇಕು ಎನ್ನುವ ಆಲೋಚನೆ ಇತ್ತು. ಒಂದಷ್ಟು ಸಿಂಧುತ್ವ ಬಾಕಿಯಿದ್ದು ಮೇ 1ರಂದು ನೇಮಕಾತಿ ಪತ್ರ ನಿಮ್ಮ ಕೈ ಸೇರುವುದು. ಪೌರಕಾರ್ಮಿಕರ ಬದುಕಿನಲ್ಲಿ ಬದಲಾವಣೆ ತರುವುದೇ ಕಾಂಗ್ರೆಸ್ ಸರ್ಕಾರದ ಸಂಕಲ್ಪ. ಪೌರಕಾರ್ಮಿಕರು ನಮ್ಮ ಹಾಗೂ ದೇಶದ ಶಕ್ತಿ ಕಾಂಗ್ರೆಸ್ ಸರ್ಕಾರ ನಿಮ್ಮ ಶಕ್ತಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.