ADVERTISEMENT

ಮೈಸೂರು | ಪ್ರೇಮದ ಪ್ರತೀಕಾರ; ಮತ್ತೊಂದು ಕೊಲೆ

ಕೊಲೆಗೈದು ಪೊಲೀಸರಿಗೆ ಮಾಹಿತಿ ನೀಡಿದ ಭೂಪರು

​ಪ್ರಜಾವಾಣಿ ವಾರ್ತೆ
Published 7 ಮೇ 2020, 21:18 IST
Last Updated 7 ಮೇ 2020, 21:18 IST
   

ಮೈಸೂರು: ಕ್ಯಾತಮಾರನಹಳ್ಳಿಯ ಸ್ನೇಹಿತರ ‘ಪ್ರೇಮ’ದ ಪ್ರತೀಕಾರ ಗುರುವಾರ ರಾತ್ರಿ ಮತ್ತೊಂದು ಜೀವವನ್ನು ಬಲಿ ಪಡೆದಿದೆ.

ಅಭಿ ಕೊಲೆಯಾದ ಯುವಕ. ಈತ ಕೊಲೆ ಆರೋಪಿ ಕಿರಣ್‌ ತಮ್ಮ.

ಪ್ರೀತಿಯ ವಿಷಯಕ್ಕಾಗಿ ಸ್ನೇಹಿತರ ನಡುವೆ ಶುರುವಾದ ಜಗಳ ಸೋಮವಾರ ರಾತ್ರಿ ಕ್ಯಾತಮಾರನಹಳ್ಳಿಯ ಸತೀಶ್‌ನನ್ನು ಬಲಿ ಪಡೆದಿತ್ತು.

ADVERTISEMENT

ಕೊಲೆಗೈದಿದ್ದ ಕ್ಯಾತಮಾರನಹಳ್ಳಿಯವರೇ ಆದ ಕಿರಣ್‌, ಮಧು ಎಂಬ ಆರೋಪಿಗಳನ್ನು ಉದಯಗಿರಿ ಪೊಲೀಸರು ಬಂಧಿಸಿದ್ದರು.

ಈ ಘಟನೆ ಬೆನ್ನಿಗೆ ಸತೀಶನ ಸ್ನೇಹಿತರಾದ ಇರ್ಫಾನ್, ಮಹೇಂದ್ರ ಗುರುವಾರ ರಾತ್ರಿ, ಕಿರಣ್‌ ತಮ್ಮ ಅಭಿಗೆ ಮೊಬೈಲ್ ಕರೆ ಮಾಡಿ, ಮಾತನಾಡುವುದಿದೆ ಬಾ ಎಂದು ಮನೆಯಿಂದ ಹೊರಗೆ ಕರೆಸಿಕೊಂಡಿದ್ದಾರೆ.

ಅಣ್ಣನ ಸ್ನೇಹಿತರ ಮಾತನ್ನು ನಂಬಿದ ಅಭಿ, ಅವರು ಹೇಳಿದಂತೆ ಗಾಯತ್ರಿಪುರಂ ಬಡಾವಣೆಗೆ ಬಂದಿದ್ದಾನೆ. ತಕ್ಷಣವೇ ಆರೋಪಿಗಳಿಬ್ಬರು ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ.

ಈ ಘಟನೆ ಬಳಿಕ ಉದಯಗಿರಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ ಒಬ್ಬರಿಗೆ ಮೊಬೈಲ್ ಕರೆ ಮಾಡಿದ ಆರೋಪಿಗಳು, ಕೊಲೆಗೈದಿರುವ ವಿಷಯವನ್ನು ತಾವೇ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿ ಬಂದ ಕಾನ್‌ಸ್ಟೆಬಲ್‌ಗೆ ಶವ ತೋರಿಸಿ, ನಜರಬಾದ್ ಪೊಲೀಸರಿಗೆ ಶರಣಾಗಿದ್ದಾರೆ.

ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ. ರಾತ್ರಿ 8.30ರ ವೇಳೆಗೆ ಕೊಲೆ ನಡೆದಿದೆ ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಸರಗಳ್ಳರಿಬ್ಬರ ಬಂಧನ
ವಿಜಯನಗರ ಮೊದಲ ಹಾಗೂ ಎರಡನೇ ಹಂತದಲ್ಲಿ ಗುರುವಾರ ರಾತ್ರಿ ಮಹಿಳೆಯರಿಬ್ಬರ ಸರಗಳವು ಮಾಡಿ, ಮತ್ತೊಂದು ಸರಗಳವಿಗೆ ಯತ್ನಿಸಿದ ಆರೋಪಿಗಳನ್ನು ಸಿಪಿಐ ಬಾಲಕೃಷ್ಣ ನೇತೃತ್ವದ ತಂಡ ಬಂಧಿಸಿದೆ.

ಮಂಡ್ಯ ಜಿಲ್ಲೆಯ ಚೇತು, ಮಾದ ಬಂಧಿತರು.

ಆರೋಪಿಗಳಿಬ್ಬರಿಂದ ಕಳವು ಮಾಡಿದ್ದ 60 ಗ್ರಾಂ ತೂಕದ ಮಾಂಗಲ್ಯ ಸರಗಳನ್ನು ವಿಜಯನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಎರಡು ಕಡೆ ಸರಗಳವು ಮಾಡಿಕೊಂಡು, ಮತ್ತೊಂದು ಕಡೆ ಕಳವಿಗೆ ಹೊಂಚು ಹಾಕುತ್ತಿದ್ದ ಆರೋಪಿಗಳಿಬ್ಬರು, ಪೊಲೀಸರನ್ನು ಕಂಡೊಡನೆ ಸ್ಥಳದಿಂದ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.

ಇವರನ್ನು ಬೆನ್ನತ್ತಿದ ಪೊಲೀಸ್ ತಂಡ ವಶಕ್ಕೆ ಪಡೆದು, ಬಂಧಿಸಿದೆ. ಸರಗಳ್ಳರಿಬ್ಬರ ಬಳಿ ವಿವಿಧ ನಂಬರ್ ಪ್ಲೇಟ್, ಹರಿತವಾದ ಚಾಕು ಇದ್ದು, ಈ ಎಲ್ಲವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.