ADVERTISEMENT

ಕುಟುಂಬದ ಐವರ ಹತ್ಯೆ: ಅಪರಾಧಿಗೆ ಸಾಯುವವರೆಗೆ ಜೈಲು

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 15:54 IST
Last Updated 16 ಜುಲೈ 2025, 15:54 IST
   

ನವದೆಹಲಿ: ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಚಪ್ಪರಹಳ್ಳಿ ಬಡಾವಣೆಯಲ್ಲಿ ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆ ಮಾಡಿದ ಅಪರಾಧಿಗೆ ಸಾಯುವವರೆಗೆ ಜೈಲು ಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ಪ್ರಕಟಿಸಿದೆ. 

ಪ್ರಕರಣದ ಅಪರಾಧಿ ತಿಪ್ಪಯ್ಯ ಎಂಬಾತ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್‌, ಸಂಜಯ್‌ ಕರೋಲ್‌ ಹಾಗೂ ಸಂದೀಪ್‌ ಮೆಹ್ತಾ ಅವರಿದ್ದ ಪೀಠವು ಹೈಕೋರ್ಟ್‌ ತೀರ್ಪನ್ನು ಮಾರ್ಪಡಿಸಿದೆ. ಅಪರಾಧಿಗೆ ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್‌ ಮರಣದಂಡನೆ ವಿಧಿಸಿದ್ದವು. 

‘ಅಪರಾಧಿಯು ತನ್ನ ಕುಟುಂಬ ಸದಸ್ಯರನ್ನು ನಿರ್ದಯವಾಗಿ ಕೊಲೆ ಮಾಡಿದ್ದಕ್ಕಾಗಿ ಕೆಳಗಿನ ನ್ಯಾಯಾಲಯಗಳ ತೀರ್ಮಾನಗಳನ್ನು ನಾವು ದೃಢೀಕರಿಸುತ್ತೇವೆ. ಆದಾಗ್ಯೂ, ಶಿಕ್ಷೆಯ ಅಂಶದ ವಿಷಯದಲ್ಲಿ ಹೈಕೋರ್ಟ್ ತನ್ನ ಮುಂದೆ ಸಾಕಷ್ಟು ವರದಿ ಹಾಗೂ ಮಾಹಿತಿಗಳನ್ನು ಹೊಂದಿತ್ತು. ಆದರೂ, ಈ ವರದಿಗಳಲ್ಲಿನ ಸಂಶೋಧನೆಗಳನ್ನು ಪೀಠವು ಸೂಕ್ತವಾಗಿ ಪರಿಗಣಿಸಲಿಲ್ಲ. ಅಪರಾಧಿ ಈ ಕೃತ್ಯ ನಡೆಸಲು ಕಾರಣವಾದ ಸಂದರ್ಭಗಳನ್ನು ಗಮನಿಸಿದರೆ ಮರಣದಂಡನೆ ಸೂಕ್ತವಲ್ಲದಿರಬಹುದು. ಅವನು ಮಾಡಿದ ಅಪರಾಧಗಳಿಗೆ ಪಶ್ಚಾತ್ತಾಪ ಪಡಲು ಜೈಲಿನಲ್ಲಿ ತನ್ನ ದಿನಗಳನ್ನು ಕಳೆಯಬೇಕು. ಹೀಗಾಗಿ, ಮರಣದಂಡನೆ ಶಿಕ್ಷೆಯಿಂದ ವಿನಾಯಿತಿ ನೀಡಲಾಗುತ್ತಿದೆ. ಕೊನೆಯ ಉಸಿರು ಇರುವ ತನಕ ಆತ ಜೈಲಿನಲ್ಲೇ ಕಳೆಯಬೇಕು’ ಎಂದು ನ್ಯಾಯಪೀಠವು ತೀರ್ಪಿನಲ್ಲಿ ತಿಳಿಸಿದೆ. 

ADVERTISEMENT

ಹಣ್ಣಿನ ವ್ಯಾಪಾರಿಯಾದ ಅಪರಾಧಿಯು ಪತ್ನಿ ಫಕೀರಮ್ಮ (36), ನಾದಿನಿ ಗಂಗಮ್ಮ (30), ಮಕ್ಕಳಾದ ಬಸಮ್ಮ (10), ರಾಜು (8) ಹಾಗೂ ಪವಿತ್ರಾ (6) ಎಂಬುವರನ್ನು 2017ರ ಫೆಬ್ರುವರಿಯಲ್ಲಿ ಕೊಲೆ ಮಾಡಿದ್ದ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.