ADVERTISEMENT

ಸುರಕ್ಷಿತ ಲೈಂಗಿಕತೆಗೆ ಒಪ್ಪದೇ ಕತ್ತು ಕೊಯ್ದ!

ಮಹಿಳೆ ಕೊಲೆ ಪ್ರಕರಣ: ಕಾವಲುಗಾರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 22:51 IST
Last Updated 23 ಜನವರಿ 2020, 22:51 IST
ಮುಕುಂದ
ಮುಕುಂದ   

ಬೆಂಗಳೂರು: ಸುಬ್ರಹ್ಮಣ್ಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 40 ವರ್ಷದ ಮಹಿಳೆ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಕಂಪನಿಯೊಂದರ ಕಾವಲುಗಾರ ಎಚ್‌.ಎಚ್‌. ಮುಕುಂದ (48) ಎಂಬಾತನನ್ನು ಬಂಧಿಸಿದ್ದಾರೆ.

‘ಕೆ.ಆರ್. ಪೇಟೆ ತಾಲ್ಲೂಕಿನ ಸಂತೇಬಾಚನಹಳ್ಳಿ ನಿವಾಸಿಯಾದ ಮುಕುಂದ, ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇದೇ 11ರಂದು ಮಧ್ಯಾಹ್ನ ಕೃತ್ಯ ಎಸಗಿ ಪರಾರಿಯಾಗಿದ್ದ’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹೇಳಿದರು.

‘ಗಾಯತ್ರಿನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು. ಅವರ ಮೈ ಮೇಲಿನ ಆಭರಣಗಳನ್ನೂ ಕಳವು ಮಾಡಲಾಗಿತ್ತು. ಮೃತ ಮಹಿಳೆಯ ಸಹೋದರಿ ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರ ವಿಶೇಷ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದು ತಿಳಿಸಿದರು.

ADVERTISEMENT

ಮೆಜೆಸ್ಟಿಕ್‌ನಲ್ಲಿ ಪರಿಚಯ: ‘ಆರೋಪಿ ಮುಕುಂದ 15 ದಿನಕ್ಕೊಮ್ಮೆ ಊರಿಗೆ ಹೋಗಲು ಮೆಜೆಸ್ಟಿಕ್‌ ಬಸ್ ನಿಲ್ದಾಣಕ್ಕೆ ಬರುತ್ತಿದ್ದ. ಅಲ್ಲಿಯೇ ಮಹಿಳೆಯರ ಪರಿಚಯ ಮಾಕೊಂಡು ಹಣ ನೀಡುವುದಾಗಿ ಹೇಳಿ ಕರೆದೊಯ್ದು ಲೈಂಗಿಕ ಕ್ರಿಯೆ ನಡೆಸುತ್ತಿದ್ದ’ ಎಂದು ಶಶಿಕುಮಾರ್ ಹೇಳಿದರು.

‘ಮಹಿಳೆ ಸಹ ಮೆಜೆಸ್ಟಿಕ್‌ಗೆ ಆಗಾಗ ಹೋಗುತ್ತಿದ್ದರು. ಅಲ್ಲಿಯೇ ಆರೋಪಿ ಮುಕುಂದನ ಪರಿಚಯವಾಗಿತ್ತು. ಲೈಂಗಿಕತೆಯಲ್ಲಿ ತೊಡಗಿದರೆ ₹ 1,500 ನೀಡುವುದಾಗಿ ಆರೋಪಿ ಹೇಳಿದ್ದ. ಬಳಿಕವೇ ಮಹಿಳೆ ಆತನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಳು.’

‘ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವಂತೆ ಮಹಿಳೆ ಹೇಳಿದ್ದರು. ಅದಕ್ಕೆ ಒಪ್ಪದ ಆರೋಪಿ, ಜಗಳ ತೆಗೆದಿದ್ದ. ಮಹಿಳೆ
ಕೂಗಾಡಲಾರಂಭಿಸಿದ್ದರು. ಅವಾಗಲೇ ಆರೋಪಿ, ಚಾಕುವಿನಿಂದ ಕತ್ತು ಕೊಯ್ದುಕೊಲೆ ಮಾಡಿದ್ದ. ಮಾಂಗಲ್ಯ ಸರ ಹಾಗೂ ಮೊಬೈಲ್ ಕದ್ದುಕೊಂಡು ಪರಾರಿಯಾಗಿದ್ದ’ ಎಂದು ಶಶಿಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.