ADVERTISEMENT

ಮುರುಘಾ ಶ್ರೀ ಕಾನೂನು ಪ್ರಕಾರ ನಡೆದುಕೊಳ್ಳಲಿ: ಜ್ಞಾನಪ್ರಕಾಶ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 10:23 IST
Last Updated 1 ಸೆಪ್ಟೆಂಬರ್ 2022, 10:23 IST
ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ
ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ   

ಮೈಸೂರು: ‘ಪೋಕ್ಸೊ ಪ್ರಕರಣದ ಆರೋಪಿ ಚಿತ್ರದುರ್ಗದ ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದಲ್ಲಿ ಕಾನೂನು ಪ್ರಕಾರ ನಡೆದುಕೊಳ್ಳಬೇಕು’ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಇಲ್ಲಿ ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿಯನ್ನು ಬಂಧಿಸಬೇಕಿತ್ತು. ಆದರೆ, ಸಂತ್ರಸ್ತರಿಗೆ ನ್ಯಾಯ ಕೊಡಿಸುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿದರು.

‘ದೇಶದಲ್ಲಿ ಕಾನೂನಿಗಿಂತಲೂ ದೊಡ್ಡವರು ಯಾರೂ ಇಲ್ಲ. ಸ್ವಾಮೀಜಿಗಳು ಕೂಡ ಸಂವಿಧಾನಕ್ಕಿಂತ ಮಿಗಿಲಾದವರೇನಲ್ಲ. ಆದರೆ, ಈ ಪ್ರಕರಣದಲ್ಲಿ ನಡೆಯುತ್ತಿರುವ ಬೆಳವಣಿಗೆಯು ಉಳ್ಳವರಿಗೊಂದು ಕಾನೂನು, ಬಡವರಿಗೊಂದು ಕಾನೂನು ಇದೆಯೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ’ ಎಂದು ಹೇಳಿದರು.

ADVERTISEMENT

‘ಪ್ರಕರಣದಲ್ಲಿ ಜನರಿಗೆ ಸತ್ಯಾಸತ್ಯತೆ ಹೊರಬರಬೇಕು. ಈ ನಿಟ್ಟಿನಲ್ಲಿ ಸರ್ಕಾರ ತ್ವರಿತವಾಗಿ ಕ್ರಮ ಜರುಗಿಸಬೇಕು. ನೊಂದವರ ಪರವಾಗಿ ಕಾರ್ಯನಿರ್ವಹಿಸಬೇಕು. ಆರೋಪಿಯನ್ನು ಕೂಡಲೇ ಬಂಧಿಸಬೇಕು. ಇದಕ್ಕಾಗಿ ಒತ್ತಾಯಿಸಿ ಸೆ.3ರಂದು ಬೆಂಗಳೂರು ಹಾಗೂ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಮೈಸೂರಿನಲ್ಲೂ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ರಾಜಕಾರಣಿಗಳು, ಬಲಿಷ್ಠ ಮಠದವರು ಸೇರಿ ಪೋಕ್ಸೊ ಕಾನೂನು ದುರ್ಬಲಗೊಳಿಸುವುದು ಸರಿಯಲ್ಲ. ಸಂತ್ರಸ್ತರಿಗೆ ಭಯ ಮೂಡುವಂತಹ ವಾತಾವರಣ ನಿರ್ಮಿಸಬಾರದು. ಬಲಿಷ್ಠ ರಾಜಕಾರಣ ಹಾಗೂ ಮಠದ ನಡುವೆ ಸಂತ್ರಸ್ತರ ನೋವು ಕಡೆಗಣಿಸಬಾರದು’ ಎಂದರು.

‘ಆರೋಪಿಯನ್ನು ಬಂಧಿಸದೆ ಸ್ಥಳ ಮಹಜರು ಮಾಡಿದ ಪೊಲೀಸರ ಕ್ರಮ ಖಂಡನೀಯ. ಸಂತ್ರಸ್ತರ ಪರವಾಗಿ ಎಲ್ಲರೂ ನಿಲ್ಲಬೇಕಾದುದು ಧರ್ಮ. ಆರೋಪಿಯನ್ನು ರಕ್ಷಿಸಲು ಒತ್ತಡ ಅಥವಾ ರಾಜಕೀಯ ಷಡ್ಯಂತ್ರ ನಡೆಸುವುದು ಸರಿಯಲ್ಲ’ ಎಂದು ಹೇಳಿದರು.

‘ಶ್ರೀಗಳು ತಾವಾಗಿಯೇ ವಿಚಾರಣೆಗೆ ಒಳಗಾಗಿ, ಆರೋಪ ಮುಕ್ತರಾಗಿ ಬಂದರೆ ನಾವೇ ವಿಜೃಂಭಣೆಯಿಂದ ಸ್ವಾಗತಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.