ADVERTISEMENT

ಲೈಂಗಿಕ ಶೋಷಣೆ ಪ್ರಕರಣ | ದೂರು ವಾಪಸ್‌ಗೆ ಶರಣರಿಂದ ಹಣ: ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2022, 21:27 IST
Last Updated 16 ನವೆಂಬರ್ 2022, 21:27 IST
   

ಮೈಸೂರು: ‘ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಂದ ಲೈಂಗಿಕ ಶೋಷಣೆಗೆ ಒಳಗಾದ ಬಾಲಕಿಯು ನೀಡಿರುವ ಗುರುತರ ಮಾಹಿತಿಯನ್ನು ಆಧರಿಸಿ ತನಿಖೆ ನಡೆಸಬೇಕು’ ಎಂದು ಕೋರಿ ಒಡನಾಡಿ ಸೇವಾ ಸಂಸ್ಥೆಯು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಬುಧವಾರ ಪತ್ರ ಬರೆದಿದೆ.

‘ಸದ್ಯ ಒಡನಾಡಿಯಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತ ಬಾಲಕಿಯು ಆಪ್ತಸಮಾಲೋಚನೆ ವೇಳೆ ಮುಖ್ಯ ಮಾಹಿತಿ ಹಂಚಿಕೊಂಡಿದ್ದಾಳೆ. ಚಿತ್ರದುರ್ಗದ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಯಲ್ಲಿದ್ದಾಗ ಜೊತೆಗಾರ್ತಿ ಹಾಗೂದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ಒಂದು ದಿನ ಸಂಜೆ ಆಕೆಯ ತಂದೆ ಬಾಲಭವನದ ದೂರವಾಣಿಗೆ ಕರೆ ಮಾಡಿದ್ದರು. ಅಲ್ಲಿನಸಿಬ್ಬಂದಿಯು, ಲೌಡ್‌ಸ್ಪೀಕರ್‌ ಆನ್ ಮಾಡಿ ಮಾತನಾಡಿಸಿದ್ದರು. ‘ಸ್ವಾಮಿಗಳು ನಮ್ಮನ್ನು ನೋಡಿಕೊಂಡಿದ್ದಾರೆ; ಹಣವನ್ನೂ ಕೊಟ್ಟಿದ್ದಾರೆ. ನೀನು ಯಾವ ಕೇಸನ್ನೂ ಮುಂದುವರಿಸುವುದು ಬೇಡ. ದೂರು ವಾಪಸ್‌ ತೆಗೆದುಕೊಂಡು ಬಂದು ಬಿಡು’ ಎಂದು ಗೆಳತಿಯ ತಂದೆಯು ಹೇಳಿದ್ದನ್ನು ಕೇಳಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾಳೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ಮಕ್ಕಳ ಮೇಲೆ ನಡೆದಿರುವ ಹೀನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಹಣದ ಆಮಿಷ ಒಡ್ಡಿ ಮುಚ್ಚಿ ಹಾಕಲು ಆರೋಪಿ ಯತ್ನಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ. ಆದ್ದರಿಂದ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಆಯೋಗದ ಮೂಲಕ ವಿಶೇಷ ತನಿಖಾ ಸಮಿತಿ ರಚಿಸಬೇಕು. ಚಿತ್ರದುರ್ಗ ಸಿಡಬ್ಲ್ಯುಸಿಯ ಅಧ್ಯಕ್ಷರು, ಸಿಬ್ಬಂದಿ, ಶೋಷಣೆಗೆ ಒಳಪಟ್ಟ ಮಕ್ಕಳನ್ನು ಹಾಗೂ ಆ ಹುಡುಗಿಯ ತಂದೆ ಹಾಗೂ ಚಿಕ್ಕಪ್ಪನನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಕೋರಲಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ಪರಶುರಾಮ್ ಎಂ.ಎಲ್. ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.