ADVERTISEMENT

ಮುರುಘಾಶ್ರೀ ಜನ್ಮದಿನ ಇನ್ನು ಸಮಾನತಾ ದಿನ: ಬೊಮ್ಮಾಯಿ

‘ಪರಿವರ್ತನಪರ ಧರ್ಮಸಂಸತ್‌’ ವತಿಯಿಂದ ‘ಸಮಾನತ ದಿನ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 18:37 IST
Last Updated 11 ಏಪ್ರಿಲ್ 2022, 18:37 IST
ರೊಬೋಟ್‌ ಯಂತ್ರದ ಗುಂಡಿ ಒತ್ತುವ ಮೂಲಕ ‘ಸಮಾನತಾ ದಿನ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಸಚಿವರಾದ ವಿ. ಸುನೀಲ್‌ಕುಮಾರ್, ಗೋವಿಂದ ಕಾರಜೋಳ, ಶಿವಮೂರ್ತಿ ಮುರುಘಾ ಶರಣರು, ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಇದ್ದರು
ರೊಬೋಟ್‌ ಯಂತ್ರದ ಗುಂಡಿ ಒತ್ತುವ ಮೂಲಕ ‘ಸಮಾನತಾ ದಿನ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಸಚಿವರಾದ ವಿ. ಸುನೀಲ್‌ಕುಮಾರ್, ಗೋವಿಂದ ಕಾರಜೋಳ, ಶಿವಮೂರ್ತಿ ಮುರುಘಾ ಶರಣರು, ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಇದ್ದರು   

ಬೆಂಗಳೂರು: ‘ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಜನ್ಮದಿನವನ್ನು (ಏಪ್ರಿಲ್‌ 11) ಇನ್ನು ಮುಂದೆ ‘ಸಮಾನತಾ ದಿನ’ವೆಂದು ರಾಜ್ಯ ಸರ್ಕಾರದ ವತಿಯಿಂದ ಆಚರಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಶಿವಮೂರ್ತಿ ಮುರುಘಾ ಶರಣರ ಜನ್ಮದಿನಾಚರಣೆ ಬದಲು ‘ಪರಿವರ್ತನಪರ ಧರ್ಮಸಂಸತ್‌’ ವತಿಯಿಂದ ಅರಮನೆ ಮೈದಾನದಲ್ಲಿ ಸೋಮವಾರ ನಡೆದ ‘ಸಮಾನತ ದಿನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾತನಾಡಿದರು.

‘ಹಲವು ಟೀಕೆ–ಟಿಪ್ಪಣಿಗಳು ಬಂದಾಗಲೂ ಬಸವ ತತ್ವವನ್ನು ಎಂದಿಗೂ ಕೈಬಿಡುವುದಿಲ್ಲ ಎನ್ನುವ ದಿಟ್ಟ ನಿಲುವಿನಿಂದ ಎಲ್ಲ ವರ್ಗದ ಜನರಿಗೆ, ಧ್ವನಿ ಇಲ್ಲದವರಿಗೆ ಧ್ವನಿ, ಗುರುತಿಲ್ಲದವರಿಗೆ ಗುರುತು ನೀಡಲು ಹಾಗೂ ಎಲ್ಲ ಸಮಾಜದವರಿಗೆ ಗುರು ಪೀಠ ಸ್ಥಾಪಿಸುವ ಮೂಲಕ ಮುರುಘಾಶ್ರೀಗಳು ಹೊಸ ಮನ್ವಂತರ ತಂದಿದ್ದಾರೆ. ಬಸವಣ್ಣನವರ ವೈಚಾರಿಕತೆ, ತತ್ವ, ಆದರ್ಶಗಳನ್ನು ಪುನ: ಬಿತ್ತುವಂಥ ಸಾಹಸಕ್ಕೆ ಕೈ ಹಾಕಿರುವ ಶ್ರೀಗಳ ಜನ್ಮದಿನವನ್ನು ಸಮಾನತಾ ದಿನ ಎಂದು ಆಚರಿಸುತ್ತಿರುವುದು ಸೂಕ್ತವಾಗಿದೆ’ ಎಂದರು.

ADVERTISEMENT

‘ಕಾಕತಾಳೀಯವೆಂದರೆ ಬಸವಣ್ಣನವರ ಪರಿವರ್ತನೆಯ ಕಾಲ 12ನೇ ಶತಮಾನ. ಮುರುಘಾ ಶರಣರು ಪರಿವರ್ತನೆ ಮಾಡುವ ಕಾಲ 21ನೇ ಶತಮಾನ. 12ನೇ ಶತಮಾನದಲ್ಲಿಯೂ ಸಾಕಷ್ಟು ಪ್ರತಿರೋಧದ ನಡುವೆ ಪರಿವರ್ತನೆ ಆಯಿತು. 21ನೇ ಶತಮಾನದಲ್ಲಿಯೂ ಅಷ್ಟೇ ಪ್ರತಿರೋಧ ಇದೆ. ಸರ್ವರಿಗೂ ಸಮಾನತೆ ನೀಡುವ ತತ್ವವನ್ನು ಸಮಾಜದಲ್ಲಿ ಬೇರೂರಬೇಕೆಂಬ ಸಂಕಲ್ಪವನ್ನು 21ನೇ ಶತಮಾನದಲ್ಲಿ ಮಾಡುವುದು ಬಹಳ ದೊಡ್ಡ ಸವಾಲು. ಆ ಸವಾಲು ಎದುರಿಸಿ ಅದರ ಬೀಜಾಂಕುರ ಮುರುಘಾ ಶರಣರು ಮಾಡಿದ್ದಾರೆ’ ಎಂದರು.

ಮುರುಘಾ ಶ್ರೀಗಳು ಮಾತನಾಡಿ, ‌‘ನಾನು ಎಂದೂ ಜನ್ಮದಿನಾಚರಣೆ ಆಚರಿಸಿಕೊಂಡವನಲ್ಲ. ಆ ವಿಚಾರವೂ ನನ್ನಲ್ಲಿ ಇಲ್ಲ. ಆದರೆ, ಅದರ ಬದಲು ಸಮಾನತಾ ದಿನವಾಗಿ ಮುನ್ನೆಲೆಗೆ ಬಂದಿದೆ. ಜನ್ಮದಿನಾಚರಣೆ ಇಲ್ಲಿ ಗೌಣ. ಸಮಾನತೆ ಪ್ರಧಾನ’ ಎಂದರು.

‌‘ನಮ್ಮ ಮಠದಲ್ಲಿ ನಾನು ಬಂದ ಮೇಲೆ ಲಿಂಗ ತಾರತಮ್ಯ ನಿವಾರಣೆ ಮಾಡಿದ್ದೇವೆ. ಅಸ್ಪೃಶ್ಯತೆ ನಿವಾರಿಸಿದ್ದೇವೆ. ಮಠದಲ್ಲಿ ಸವರ್ಣೀಯ, ದಲಿತ ಎಂಬ ಅಸ್ಪೃಶ್ಯತೆ ಇಲ್ಲ. ಸಹಪಂಕ್ತಿ‌ ಭೋಜನ ಇದೆ. ಆದರೆ, ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಇದೆ. ಇದನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಸಮಾಜ, ಸಮಾನತೆ, ಸೇವೆಯೇ ನನ್ನ ಧ್ಯೇಯ. ಅದಕ್ಕಾಗಿ ಜೀವನದಲ್ಲಿ ನೋವು, ಕಷ್ಟಗಳನ್ನು ಕಂಡಿದ್ದೇನೆ’ ಎಂದರು.

ಶಾಸಕ ರಾಜಶೇಖರ ಪಾಟೀಲ ತೇಲ್ಕೂರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.