ADVERTISEMENT

ಶರಣರ ಜಾಮೀನು ಅರ್ಜಿ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2022, 20:13 IST
Last Updated 13 ಡಿಸೆಂಬರ್ 2022, 20:13 IST
ಚಿತ್ರದುರ್ಗದ ಶಿವಮೂರ್ತಿ ಶರಣರು
ಚಿತ್ರದುರ್ಗದ ಶಿವಮೂರ್ತಿ ಶರಣರು   

ಬೆಂಗಳೂರು: ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಶಿವಮೂರ್ತಿ ಶರಣರ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಪುನಃ ಮುಂದೂಡಿದೆ.

ಈ ಸಂಬಂಧ ಶಿವಮೂರ್ತಿ ಶರಣರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ಮುಂದುವರಿಸಿತು.

ಶರಣರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರು, ‘ಜೈಲಿನಲ್ಲಿರುವ ಅರ್ಜಿದಾರ ಶರಣರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಇನ್ನಷ್ಟು ಸಮಯಾವಕಾಶ ನೀಡಬೇಕು. ಮುಂದಿನ ವಿಚಾರಣೆಯಲ್ಲಿ ಅರ್ಜಿ ವಾಪಸು ಪಡೆಯುವುದೊ ಹೇಗೆ ಎಂಬ ಬಗ್ಗೆ ನ್ಯಾಯಪೀಠಕ್ಕೆ ತಿಳಿಸಲಾಗುವುದು’ ಎಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಿತು.

ADVERTISEMENT

ಇದೇ 19ರಿಂದ ತಿಂಗಳಾಂತ್ಯದವರೆಗೆ ಹೈಕೋರ್ಟ್‌ಗೆ ಕ್ರಿಸ್‌ಮಸ್‌ ರಜೆ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ನಿಯೋಜಿತ ವಿಶೇಷ ನ್ಯಾಯಪೀಠಗಳು ತುರ್ತು ಪ್ರಕರಣಗಳನ್ನು ಮಾತ್ರವೇ ವಿಚಾರಣೆಗೆ ಕೈಗೆತ್ತಿಕೊಳ್ಳಲಿವೆ. ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಶಿವಮೂರ್ತಿ ಶರಣರನ್ನು ಪೊಲೀಸರು 2022ರ ಸೆ.1ರಂದು ಬಂಧಿಸಿದ್ದು, ಸದ್ಯ ಚಿತ್ರದುರ್ಗ ಜೈಲಿನಲ್ಲಿ ಬಂಧನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.