ಬೆಂಗಳೂರು: ‘ಮುದ್ರಾ, ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಆವಾಸ್ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಯವರ ವಿವಿಧ ಯೋಜನೆಗಳ ಅನುಕೂಲ ಪಡೆದಿರುವ ಮುಸ್ಲಿಂ ಮಹಿಳೆಯರು ಈ ಬಾರಿ ಅವರ ಪರ ನಿಲ್ಲುತ್ತಾರೆ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
‘ಶುಕ್ರಿಯಾ ಮೋದಿ ಭಾಯ್ ಜಾನ್’ ಕಾರ್ಯಕ್ರಮ ಕುರಿತು ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ಮೋದಿಯವರು ಏನೆಲ್ಲಾ ಕೆಲಸ ಮಾಡಿದ್ದಾರೆ ಎಂಬುದರ ಅರಿವು ಮುಸ್ಲಿಂ ತಾಯಂದಿರಿಗೆ ಇದೆ. ಆದರೆ, ಅದನ್ನು ಅದುಮಿಡುವ ಕೆಲಸ ನಡೆದಿದೆ. ಮುಸ್ಲಿಂ ತಾಯಂದಿರ ಅಭಿಪ್ರಾಯಗಳನ್ನು ಹೊರತರಲು ಶುಕ್ರಿಯಾ ಮೋದಿ ಭಾಯ್ ಜಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.
ಈ ಕಾರ್ಯಕ್ರಮದಿಂದ ವಿರೋಧ ಪಕ್ಷಗಳ ‘ಇಂಡಿ’ ಮೈತ್ರಿಕೂಟಕ್ಕೆ ಹಿನ್ನಡೆ ಆಗುತ್ತದೆ. ಕೋಟ್ಯಂತರ ಮುಸ್ಲಿಂ ಮಹಿಳೆಯರು ಪ್ರಧಾನಿ ಪರ ನಿಲ್ಲುತ್ತಾರೆ ಎಂದು ಹೇಳಿದರು.
ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ಸ್ತಬ್ಧಚಿತ್ರಗಳ ಆಯ್ಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಮಾರ್ಗಸೂಚಿಯಂತೆ ಎಲ್ಲವೂ ನಡೆದಿದೆ. ಜನರನ್ನು ಕೆರಳಿಸಲು ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದರು.
‘ರಾಜ್ಯದಿಂದ ಹೂಡಿಕೆದಾರರು ಹೊರ ಹೋಗುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಿದೇಶಿ ನೇರ ಹೂಡಿಕೆ ಶೇಕಡ 30ರಷ್ಟು ಕುಸಿದಿದೆ. ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳುವುದರಲ್ಲೇ ತಲ್ಲೀನರಾಗಿದ್ದಾರೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.