ADVERTISEMENT

ಎಸ್ಸೆಸ್ಸೆಲ್ಸಿ ತೇರ್ಗಡೆಯಾದರಷ್ಟೇ ಕಸಾಪ ಸದಸ್ಯತ್ವ!

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ₹50 ಸಾವಿರ ಠೇವಣಿ *ಕಾರ್ಯಕಾರಿ ಸಮಿತಿ ಪ್ರತಿನಿಧಿಗಳ ಸಂಖ್ಯೆ 81ಕ್ಕೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 19:51 IST
Last Updated 14 ಫೆಬ್ರುವರಿ 2022, 19:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಸದಸ್ಯರಾಗಲು 10ನೇ ತರಗತಿ ತೇರ್ಗಡೆಯಾಗಿರಬೇಕು. ಇಲ್ಲದಿದ್ದರೆ ಪರಿಷತ್ತು ನಡೆಸುವ ಪರೀಕ್ಷೆಯನ್ನು ಎದುರಿಸಬೇಕು. ಹೊರನಾಡು, ಹೊರದೇಶದಲ್ಲಿರುವ ಕನ್ನಡಿಗರಿಗೆ ಈ ಶೈಕ್ಷಣಿಕ ಅರ್ಹತೆ ಹಾಗೂ ಪರೀಕ್ಷೆ ಅನ್ವಯವಾಗದು.

ಪರಿಷತ್ತಿನ ಬೈ–ಲಾ ತಿದ್ದುಪಡಿಗೆ ಸಂಬಂಧಿಸಿದಂತೆ ರಚಿಸಲಾದ ಕರಡಿನಲ್ಲಿ ನಮೂದಿಸಿಲಾಗಿರುವ ಪ್ರಸ್ತಾವಿತ ತಿದ್ದುಪಡಿ ಇವಾಗಿವೆ.ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ನೇತೃತ್ವದಲ್ಲಿ ರಚಿಸಲಾದ ಸಮಿತಿ ಕರಡು ಸಿದ್ಧಪಡಿಸಿದೆ. ಇದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಪ್ರಸ್ತಾವಿತ ತಿದ್ದುಪಡಿಯಲ್ಲಿ ಅಧಿಕಾರದ ಕೇಂದ್ರೀಕರಣಕ್ಕೆ ಆದ್ಯತೆ ನೀಡಲಾಗಿದೆ. ಕಾರ್ಯಕಾರಿ ಸಮಿತಿಯಲ್ಲಿನ ಪ್ರತಿನಿಧಿಗಳ ಸಂಖ್ಯೆ 81ಕ್ಕೆ ಹೆಚ್ಚಳ, ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಠೇವಣಿ ಮೊತ್ತ ₹ 50 ಸಾವಿರಕ್ಕೆ ಏರಿಕೆ ಸೇರಿದಂತೆ ಹಲವು ತಿದ್ದುಪಡಿಗಳನ್ನು ಶಿಫಾರಸು ಮಾಡಲಾಗಿದೆ.

ADVERTISEMENT

ಪರಿಷತ್ತಿನ ಸದಸ್ಯರಾಗಲು ಕನ್ನಡ ಓದು–ಬರಹ ಬರಬೇಕೆಂದು ಹಿಂದಿನಿಂದಲೂ ಇದೆ. ಈಗ ಹೊಸದಾಗಿ ಶೈಕ್ಷಣಿಕ ಅರ್ಹತೆ ಹಾಗೂ ಪರೀಕ್ಷೆಯನ್ನು ಸೇರ್ಪಡೆ ಮಾಡಲಾಗಿದೆ. ಗಡಿ ರಾಜ್ಯ, ಹೊರ ರಾಜ್ಯ, ಕೇಂದ್ರಾಡಳಿತ ಪ್ರದೇಶ, ಹೊರದೇಶದ ಕನ್ನಡಿಗರಿಗೆ ಸದಸ್ಯರಾಗಲು ಷರತ್ತಿನಿಂದ ವಿನಾಯಿತಿ ನೀಡಲಾಗಿದೆ. ಪರಿಷತ್ತಿನ ಸದಸ್ಯರು, ಸದಸ್ಯ ಸಂಸ್ಥೆಗಳು ಅನುಚಿತ ನಡವಳಿಕೆ ಇತ್ಯಾದಿ ಆರೋಪಕ್ಕೆ ಒಳಗಾದರೆ, ಮೇಲ್ನೋಟಕ್ಕೆ ಸರಿ ಎನಿಸಿದರೆ ಕೇಂದ್ರ ಘಟಕದ ಅಧ್ಯಕ್ಷರು ಅಂತಹವರನ್ನು ನೇರವಾಗಿ ಅಮಾನತು ಮಾಡಬಹುದು. ಇದಕ್ಕೆ ಕಾರ್ಯಕಾರಿ ಸಮಿತಿಯ ಒಪ್ಪಿಗೆ ಬೇಕಿಲ್ಲ ಎಂದು ಹೇಳಲಾಗಿದೆ.

ತಾತ್ಕಾಲಿಕವಾಗಿ ಜಿಲ್ಲೆ ಸೇರಿದಂತೆ ವಿವಿಧ ಘಟಕಗಳಿಗೆ ಅಧ್ಯಕ್ಷರ ನೇಮಕಾತಿ ಅಧಿಕಾರವನ್ನು ಕೇಂದ್ರ ಘಟಕದ ಅಧ್ಯಕ್ಷರಿಗೆ ನೀಡುವ ಬಗ್ಗೆ ಕರಡು ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯ, ಜಿಲ್ಲಾ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರ ಚುನಾವಣೆಗೆ ಮೊಬೈಲ್ ಆ್ಯಪ್ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

ಕೇಂದ್ರ ಘಟಕದ ಅಧ್ಯಕ್ಷರಿಗೆ ಅಧಿಕಾರ: ಪರಿಷತ್ತಿಗೆ ಸಿಬ್ಬಂದಿ ನೇಮಕಾತಿ ಅಧಿಕಾರವನ್ನು ಕೇಂದ್ರ ಘಟಕದ ಅಧ್ಯಕ್ಷರಿಗೆ ನೀಡವ ಬಗ್ಗೆ ಕರಡು ಪ್ರತಿಯಲ್ಲಿ ತಿಳಿಸಲಾಗಿದೆ. ಈ ಅಧಿಕಾರ ಸದ್ಯ ಕಾರ್ಯಕಾರಿ ಸಮಿತಿಗೆ ಇದೆ. ಜಿಲ್ಲೆ, ತಾಲ್ಲೂಕು, ಹೋಬಳಿ ಕಾರ್ಯಕಾರಿ ಸಮಿತಿಯ ಪಟ್ಟಿಗೆ ಕೇಂದ್ರ ಅಧ್ಯಕ್ಷರ ಅನುಮತಿ ಪಡೆಯಬೇಕೆಂದು ತಿಳಿಸಲಾಗಿದೆ. ರಾಜ್ಯ, ಜಿಲ್ಲಾ ಸಮ್ಮೇಳನಗಳ ಅತಿಥಿಗಳ ಆಯ್ಕೆಯ ತೀರ್ಮಾನವನ್ನು ಕೇಂದ್ರ ಘಟಕದ ಅಧ್ಯಕ್ಷರಿಗೆ ನೀಡಲಾಗಿದೆ.

ಕಸಾಪ ಕೇಂದ್ರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ₹ 1 ಸಾವಿರ ಇದ್ದ ಠೇವಣಿಯನ್ನು ₹ 50 ಸಾವಿರಕ್ಕೆ ಹೆಚ್ಚಿಸುವ ಬಗ್ಗೆ ಕರಡಿನಲ್ಲಿ ತಿಳಿಸಲಾಗಿದೆ. ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ₹ 25 ಸಾವಿರ, ತಾಲ್ಲೂಕಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ₹ 10 ಸಾವಿರ ಠೇವಣಿ ಇಡಬೇಕು ಎಂದು ಹೇಳಲಾಗಿದೆ. ಒಮ್ಮೆ ಗೆದ್ದವರು ಒಂದು ಅವಧಿಗೆ ಮಾತ್ರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಬೇಕು. ಮತ್ತೊಮ್ಮೆ ಸ್ಪರ್ಧೆ ಮಾಡುವಂತಿಲ್ಲ ಎಂದು ಶಿಫಾರಸು ಮಾಡಲಾಗಿದೆ.

ಸರ್ಕಾರಿ ಸಂಸ್ಥೆ ಪ್ರತಿನಿಧಿಗಳು ಸದಸ್ಯರು

ಈಗಿನ ಬೈ–ಲಾ ‍ಪ್ರಕಾರ ಕಾರ್ಯಕಾರಿ ಸಮಿತಿಯಲ್ಲಿ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರು ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷರು ಇರುತ್ತಿದ್ದರು. ಆದರೆ, ತಿದ್ದುಪಡಿಯಲ್ಲಿ ಇವರಿಗೆ ಸ್ಥಾನ ನೀಡಿಲ್ಲ. ಗೌರವ ಕಾರ್ಯದರ್ಶಿ ಹುದ್ದೆಯನ್ನು ಎರಡರಿಂದ ಐದಕ್ಕೆ ಏರಿಸುವ ಹಾಗೂ ಸಂಘ–ಸಂಸ್ಥೆ ಪ್ರತಿನಿಧಿಯನ್ನೂ ಒಬ್ಬರಿಂದ ಐದು ಜನರಿಗೆ ಹೆಚ್ಚಿಸುವ ಪ್ರಸ್ತಾಪ ಮಾಡಲಾಗಿದೆ.

ಕನ್ನಡ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ವಿವಿಧ ಇಲಾಖೆಗಳ ಆಯುಕ್ತರು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆ, ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘಗಳ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿರುತ್ತಾರೆ ಎಂದು ಕರಡು ಪ್ರತಿಯಲ್ಲಿ ತಿಳಿಸಲಾಗಿದೆ.

ಈವರೆಗೆ ಸಂಸ್ಕೃತಿ ಇಲಾಖೆ ನಿರ್ದೇಶಕರು ಮಾತ್ರ ಸರ್ಕಾರದ ಪ್ರತಿನಿಧಿಯಾಗಿ ಇರುತ್ತಿದ್ದರು.

‘ಸಮಿತಿ ವರದಿ ಬಗ್ಗೆ ಚರ್ಚಿಸಿ ಕ್ರಮ’

‘ಬೈ–ಲಾ ತಿದ್ದುಪಡಿಗೆ ಸಂಬಂಧಿಸಿದಂತೆ ಕಾನೂನು ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಸಮಿತಿ ನೀಡಿದ ಸಲಹೆಗಳನ್ನೆಲ್ಲ ಅನುಷ್ಠಾನ ಮಾಡಬೇಕೆಂದಿಲ್ಲ. ಈ ಬಗ್ಗೆ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆ ನಡೆಸಿ, ನಿಬಂಧನೆಗೆ ಕಾನೂನಿನ ಅಡಿಯಲ್ಲಿ ತಿದ್ದುಪಡಿ ತರಲಾಗುವುದು. 1915ರಲ್ಲಿ ರಚನೆಯಾದ ನಿಬಂಧನೆಯಲ್ಲಿಯೇ ಕನ್ನಡ ಓದು–ಬರಹ ಬರಬೇಕೆಂದು ತಿಳಿಸಲಾಗಿದೆ. ಚುನಾವಣೆಗೆ ಹೋದಾಗ ಕೆಲವರಿಗೆ ಓದು, ಬರಹ ಬರದಿದ್ದನ್ನು ನೋಡಿದ್ದೇನೆ. ಸದಸ್ಯತ್ವ ಪಡೆದಿದ್ದವರಲ್ಲಿ ಕೆಲವರಿಗೆ ಸಹಿ ಹಾಕಲು ಬರುತ್ತಿರಲಿಲ್ಲ. ಅಂತಹವರು ಹೆಬ್ಬೆಟ್ಟುಒತ್ತುತ್ತಿದ್ದರು. ಹೀಗಾಗಿ, ಶಿಕ್ಷಣ ಮತ್ತು ಪರೀಕ್ಷೆಯ ಸಲಹೆ ಬಂದಿದೆ’ ಎಂದು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.

‘ಗಡಿ ನಾಡಿನ ರಾಜ್ಯಗಳಲ್ಲಿ ಶೇ 7ರಿಂದ ಶೇ 10 ರಷ್ಟು ಮಂದಿಗೆ ಕನ್ನಡ ಓದಲು, ಬರೆಯಲು ಬರುವುದಿಲ್ಲ. ಭಾಷೆ ಮತ್ತು ಸಂಸ್ಕೃತಿ ಅಭಿವೃದ್ಧಿ ಹೊಂದಲು ಕನ್ನಡ ಕಲಿಕೆ ಅಗತ್ಯ. 7ನೇ ತರಗತಿ ಉತ್ತೀರ್ಣರಾದವರಿಗೂ ಸದಸ್ಯತ್ವ ನೀಡಲು ನಿರ್ಧರಿಸಲಾಗಿದೆ. ಕನ್ನಡ ಓದಲು–ಬರೆಯಲು ಬರದವರಿಗೆ ಸರಳ ಕನ್ನಡ ಕಲಿಸಿ, ಪರೀಕ್ಷೆ ಮಾಡಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.