ADVERTISEMENT

‘ಮೈಲಾರ ಕಾರಣಿಕ ನುಡಿ ಗ್ರಹಿಕೆಗೆ ತಂತ್ರಜ್ಞಾನ ಅಳವಡಿಕೆ’

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 20:27 IST
Last Updated 17 ಫೆಬ್ರುವರಿ 2019, 20:27 IST

ಹೂವಿನಹಡಗಲಿ (ಬಳ್ಳಾರಿ ಜಿಲ್ಲೆ): ತಾಲ್ಲೂಕಿನ ಮೈಲಾರ ಸುಕ್ಷೇತ್ರದಲ್ಲಿ ಫೆ.22 ರಂದು ಜರುಗಲಿರುವ ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿಯನ್ನು ಧ್ವನಿ ಮುದ್ರಿಸಿಕೊಳ್ಳಲು ಈ ಬಾರಿ ಸೂಕ್ಷ್ಮ ತಂತ್ರಜ್ಞಾನವನ್ನು ಅಳವಡಿಸುತ್ತಿರುವುದಾಗಿ ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್.ಪ್ರಕಾಶರಾವ್‌ ಅವರು ತಿಳಿಸಿದರು.

ಕಳೆದ ಬಾರಿ ಗೊರವಯ್ಯ ನುಡಿದ ಕಾರಣಿಕ ನುಡಿಯು ಅಸ್ಪಷ್ಟವಾಗಿ ಕೇಳಿಸಿದ್ದರಿಂದ ಭಾರೀ ಗೊಂದಲ ಉಂಟಾಗಿತ್ತು. ಅಂತಿಮವಾಗಿ ಜಿಲ್ಲಾಡಳಿತವು, ಆಡಿಯೊ ರೆಕಾರ್ಡಿಂಗ್ ಸ್ಟುಡಿಯೊದಲ್ಲಿ ಧ್ವನಿ ಪರೀಕ್ಷೆ ನಡೆಸಿದ ಬಳಿಕ ಅಧಿಕೃತ ಕಾರಣಿಕ ನುಡಿಯನ್ನು ಪ್ರಕಟಿಸಿತ್ತು.

‘ಕಳೆದ ವರ್ಷದಂತಹ ನ್ಯೂನತೆ ಆಗದಂತೆ ಈ ಬಾರಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಕಾರಣಿಕ ಜರುಗುವ ಡೆಂಕನಮರಡಿ ಸ್ಥಳದಲ್ಲಿ 20 ಲೈನರ್ ಸ್ಪೀಕರ್, ಮೂವಿಂಗ್ ಕ್ಯಾಮೆರಾ ಅಳವಡಿಸಲಿದ್ದೇವೆ. ಗೊರವಯ್ಯನಿಗೆ, ಸೂಕ್ಷ್ಮ ಧ್ವನಿ ಗ್ರಹಿಸುವ ಮೈಕ್ರೊಫೋನ್‌ ಜೋಡಣೆ ಮಾಡಲಿದ್ದೇವೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕವೇ ಕಾರಣಿಕ ನುಡಿಯನ್ನು ಪ್ರಕಟಿಸಲಿದ್ದೇವೆ’ ಎಂದು ಹೇಳಿದರು.

ADVERTISEMENT

ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿಯನ್ನು ಭಕ್ತರು ಸಾಕ್ಷತ್ ಶಿವನೇ ನುಡಿಯುವ ಭವಿಷ್ಯವಾಣಿ ಎಂದು ನಂಬುತ್ತಾರೆ. ಪ್ರಚಲಿತ ವರ್ಷದ ಮಳೆ, ಬೆಳೆ, ವಾಣಿಜ್ಯ ವ್ಯವಹಾರ, ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿಗತಿಗಳಿಗೆ ಹೋಲಿಕೆ ಮಾಡುತ್ತಾರೆ. ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಕಾರಣಿಕ ನುಡಿಯನ್ನು ಸ್ಪಷ್ಟವಾಗಿ ಕೇಳಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತಿರುವುದಾಗಿ ತಿಳಿಸಿದರು.

**

ಫೆ.22ರಂದು ಮೈಲಾರ ಕ್ಷೇತ್ರದಲ್ಲಿ ಕಾರಣಿಕೆ

ಈ ಬಾರಿ ಗೊರವಯ್ಯನಿಗೆ ಮೈಕ್ರೊಫೋನ್‌ಜೋಡಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.