ADVERTISEMENT

ಮೈಮುಲ್‌ ನೇಮಕಾತಿ ಅಕ್ರಮ | ಮತ್ತಷ್ಟು ದಾಖಲೆ ಬಿಡುಗಡೆ ಮಾಡುವೆ: ಅಭ್ಯರ್ಥಿ ಚೈತ್ರಾ

ಸಂದರ್ಶನ ನಡೆಸಿದರೆ ಪ್ರತಿಭಟನೆ–ಸಾ.ರಾ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಮೇ 2020, 6:43 IST
Last Updated 20 ಮೇ 2020, 6:43 IST
ಮೈಮುಲ್
ಮೈಮುಲ್    

ಮೈಸೂರು: ‘ನೇಮಕಾತಿ ಅಕ್ರಮದಲ್ಲಿ ತೊಡಗಿರುವ ಮೈಸೂರು ಜಿಲ್ಲಾ ಹಾಲು ಒಕ್ಕೂಟದ (ಮೈಮುಲ್‌) ಅಭ್ಯರ್ಥಿಗಳ ಸಂದರ್ಶನಕ್ಕೆ ಮುಂದಾದರೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು’ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರವು ಪ್ರಕರಣದ ತನಿಖೆ ನಡೆಸಲು ಸಹಕಾರ ಇಲಾಖೆಯ ಉಪನಿಬಂಧಕರನ್ನು ನಿಯೋಜಿಸಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿಯ ತನಿಖೆಗೆ ತಹಶೀಲ್ದಾರ್‌ ನೇಮಿಸಿದಂತಾಗಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅಪಹಾಸ್ಯ ಮಾಡಿದ್ದಾರೆ.

ಅಲ್ಲದೇ,ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಅಭ್ಯರ್ಥಿ ಚೈತ್ರಾ ಅವರನ್ನೂ ಪತ್ರಿಕಾಗೋಷ್ಠಿಗೆ ಕರೆತಂದಿದ್ದ ಅವರು ಹಂತಹಂತವಾಗಿ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.

ADVERTISEMENT

ಪರೀಕ್ಷೆ ಬರೆದಿರುವ ಚೈತ್ರಾ ಮಾತನಾಡಿ, ‘ಈಚೆಗೆ ಬಿಡುಗಡೆ ಮಾಡಿದ್ದ ಆಡಿಯೊದಲ್ಲಿ ಇರುವ ಸಂಭಾಷಣೆ ನನ್ನದೇ. ಹಣ ಕೊಡಿ ಎಂದು ಕೆಲವರು ನನ್ನನ್ನೂ ಕೇಳಿದ್ದಾರೆ. ಅದಕ್ಕೆ ನಾನು ಒಪ್ಪಲಿಲ್ಲ. ಕೆಲವರ ಬಳಿ ಎಷ್ಟು ಕೊಡುತ್ತೀರಿ ಎಂದು ನೇರವಾಗಿ ಕೇಳುತ್ತಿದ್ದಾರೆ. ಪ್ರತಿ ಹುದ್ದೆಗೆ ₹ 20 ಲಕ್ಷಕ್ಕೂ ಹೆಚ್ಚು ಬೇಡಿಕೆ ಇಟ್ಟಿರುವುದು ಗೊತ್ತಾಗಿದೆ. ಅವ್ಯವಹಾರ ನಡೆಯುತ್ತಿದೆ ಎಂಬುದು ಗೊತ್ತಾದಾಗ ಬೇಸರ ಉಂಟಾಯಿತು. ನಾನು ಮೂರು ಹುದ್ದೆಗಳಿಗೆ ಪರೀಕ್ಷೆ ಬರೆದಿದ್ದೇನೆ. ಆದರೆ, ಓಎಂಆರ್‌ ಶೀಟ್‌ ಕೊಡಲಿಲ್ಲ. ಲಾಕ್‌ಡೌನ್‌ ಸಮಯದಲ್ಲೇ ತರಾತುರಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಆಗಲೇ ಅನುಮಾನ ಉಂಟಾಯಿತು.’ ಎಂದರು.

‘ಪರೀಕ್ಷೆ ಬರೆದ ನಾನು ಪ್ರಶ್ನೆ ಹಾಗೂ ಉತ್ತರವನ್ನು ಹಾಲ್‌ ಟಿಕೆಟ್‌ನಲ್ಲಿ ನಮೂದಿಸಿಕೊಂಡು ಬಂದಿದ್ದೆ. ಅದನ್ನು ತಾಳೆ ಹಾಕಿ ನೋಡಿದಾಗ ಕನಿಷ್ಠ ‌132 ಅಂಕ ಬರಬೇಕಿತ್ತು. ಆದರೆ, 200ಕ್ಕೆ ನನಗೆ ಬಂದಿದ್ದು ಕೇವಲ 68 ಅಂಕ. ನನ್ನ ರೀತಿ ಹಲವು ಮಂದಿಗೆ ಅನ್ಯಾಯವಾಗಿದೆ. ಈಗಾಗಲೇ ಕಾನೂನು ಹೋರಾಟಕ್ಕೆ ಮುಂದಾಗಿದ್ದೇನೆ’ ಎಂಂದು ಹೇಳಿದರು.

‘ನಾನೀನ ಮೈಮುಲ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಬೆದರಿಕೆ ಕರೆಗಳು ಬರುತ್ತಿವೆ. ಆದರೆ, ಅದಕ್ಕೆ ಹೆದರುವುದಿಲ್ಲ. ಅವ್ಯವಹಾರ ನಡೆದಿರುವುದಕ್ಕೆ ನನ್ನಲ್ಲಿ ಮತ್ತಷ್ಟು ದಾಖಲೆಗಳು ಇವೆ. ಯಾರು ಹಣ ಕೇಳಿದರು, ಯಾರ ಕೈವಾಡವಿದೆ ಎಂಬ ಮಾಹಿತಿ ಇದರಲ್ಲಿದೆ. ಅಗತ್ಯ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತೇನೆ’ ಎಂದು ಸಿ.ಡಿ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.