ADVERTISEMENT

ವಿಶ್ವನಾಥ್‌ ಪುತ್ರ ಅಮಿತ್‌ನಿಂದ ಧಮಕಿ: ಶಾಸಕ ಮಂಜುನಾಥ್‌ ಆರೋಪ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 21:22 IST
Last Updated 14 ಆಗಸ್ಟ್ 2020, 21:22 IST
ಎಚ್‌.ಪಿ.ಮಂಜುನಾಥ್‌
ಎಚ್‌.ಪಿ.ಮಂಜುನಾಥ್‌   

ಮೈಸೂರು: ‘ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರ ಪುತ್ರ, ಜಿಲ್ಲಾ ಪಂಚಾಯಿತಿ ಸದಸ್ಯ ಅಮಿತ್‌ ದೇವರಹಟ್ಟಿ ಅವರು ನನಗೆ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರಿಗೆ ಧಮಕಿ, ಬೆದರಿಕೆ ಹಾಕುತ್ತಿದ್ದಾರೆ’ ಎಂದು ಹುಣಸೂರಿನ ಕಾಂಗ್ರೆಸ್‌ ಶಾಸಕ ಎಚ್‌.ಪಿ.ಮಂಜುನಾಥ್‌ ಆರೋಪಿಸಿದ್ದಾರೆ.

‘ಹುಣಸೂರಿನ ಸಿದ್ದನಕೊಪ್ಪಲು ಗ್ರಾಮದಲ್ಲಿ ಜಮೀನಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಇದ್ದ ವಿವಾದ ಬಗೆಹರಿಸಲು ನಾನು ಮುಂದಾಗಿದ್ದೆ. ಈ ವಿಚಾರದಲ್ಲಿ ರಮೇಶ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತ ಪುಟ್ಟರಾಜು ಎಂಬುವರ ನಡುವಿನ ಮಾತುಕತೆಯ ಆಡಿಯೊ ನನ್ನ ಬಳಿ ಇದೆ. ಅಮಿತ್‌ ನನಗೆ ಬೆದರಿಕೆ ಹಾಕಿರುವ ವಿಷಯದ ಪ್ರಸ್ತಾಪವೂ ಆಡಿಯೊದಲ್ಲಿದೆ’ ಎಂದು ಶುಕ್ರವಾರ ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.

‘ಜಾಗದ ವಿವಾದ ಇತ್ಯರ್ಥಪಡಿಸಲು ಎಂಎಲ್‌ಎ ಬಂದಾಗ ಅವರಿಗೆ ಹೊಡೆಯಿರಿ. ಜೈಲಿಗೆ ಹೋದರೆ, ನಮಗೆ ಬಿಡಿಸಲು ಗೊತ್ತು. ನಿಮ್ಮ ಮೇಲೆ ಕೇಸ್‌ ಆಗದಂತೆ ನೋಡಿಕೊಳ್ಳುತ್ತೇನೆ. ನಮ್ಮದೇ ಸರ್ಕಾರ ಇದೆ ಎಂದು ಅಮಿತ್‌ ಹೇಳಿರುವ ವಿಷಯ ಆಡಿಯೊದಲ್ಲಿದೆ’ ಎಂದರು.

ADVERTISEMENT

ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರ ಗಮನಕ್ಕೆ ತಂದಿದ್ದು, ಎಸ್ಪಿಗೆ ಲಿಖಿತವಾಗಿ ದೂರು ಕೊಡುವುದಾಗಿ ಅವರು ತಿಳಿಸಿದರು.

‘ಆರೋಪದಲ್ಲಿ ಹುರುಳಿಲ್ಲ’
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವನಾಥ್‌, ‘ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ತಮ್ಮ ವೈಫಲ್ಯ ಮರೆಮಾಚಲು ಇಂತಹ ಆರೋಪ ಮಾಡುತ್ತಿದ್ದಾರೆ. ನಾನು ಎಂಎಲ್‌ಸಿ ಆಗಿರುವುದನ್ನು ಸಹಿಸದೆ ರಾಜಕೀಯ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

‘ನನ್ನ ಮಗ ಜಿಲ್ಲಾ ಪಂಚಾಯಿತಿ ಸದಸ್ಯ. ಆ ರೀತಿ ಮಾತನಾಡುವವನಲ್ಲ. ನನಗೆ ಎಂಎಲ್‌ಸಿ ಸ್ಥಾನ ತಪ್ಪಿಸಲು ಕೆಲವರು ಏನೆಲ್ಲಾ ಪ್ರಯತ್ನ ಮಾಡಿದ್ದರು. ಮುಂದಿನ ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಈ ರೀತಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದರು.

ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅಮಿತ್‌, ‘ಶಾಸಕರ ಬಗ್ಗೆ ನಾನು ಏನೂ ಮಾತನಾಡಿಲ್ಲ. ಬೆದರಿಕೆ, ಧಮಕಿ ಹಾಕಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.