ADVERTISEMENT

ಕೆಆರ್‌ಎಸ್‌ನಿಂದ 18 ಸಾವಿರ ಕ್ಯುಸೆಕ್‌ ನೀರು ಹೊರಕ್ಕೆ: ಮೈದುಂಬಿದ ಕಾವೇರಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 18:55 IST
Last Updated 18 ನವೆಂಬರ್ 2021, 18:55 IST
ಶ್ರೀರಂಗಪಟ್ಟಣ ತಾಲ್ಲೂಕಿನ ಬಲಮುರಿ ಫಾಲ್ಸ್‌ನಲ್ಲಿ ಕಾವೇರಿ ನದಿ ಗುರುವಾರ ಮೈದುಂಬಿ ಹರಿಯುತ್ತಿದ್ದ ದೃಶ್ಯ -–ಪ್ರಜಾವಾಣಿ ಚಿತ್ರ
ಶ್ರೀರಂಗಪಟ್ಟಣ ತಾಲ್ಲೂಕಿನ ಬಲಮುರಿ ಫಾಲ್ಸ್‌ನಲ್ಲಿ ಕಾವೇರಿ ನದಿ ಗುರುವಾರ ಮೈದುಂಬಿ ಹರಿಯುತ್ತಿದ್ದ ದೃಶ್ಯ -–ಪ್ರಜಾವಾಣಿ ಚಿತ್ರ   

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದಿಂದ 18 ಸಾವಿರ ಕ್ಯುಸೆಕ್‌ ನೀರನ್ನು ಹೊರಗೆ ಹರಿಸುತ್ತಿದ್ದು, ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.

ತಾಲ್ಲೂಕಿನ ಬೆಳಗೊಳ ಸಮೀಪದ ಎಡಮುರಿ ಮತ್ತು ಬಲಮುರಿ ಹಾಗೂ ಕಾವೇರಿ ಬೋರೇದೇವರ ಅಣೆಕಟ್ಟೆ ಫಾಲ್ಸ್‌ಗಳಲ್ಲಿ ನೀರು ಧುಮ್ಮಿಕ್ಕುತ್ತಿದೆ. ಕಾವೇರಿ ನದಿ ಬೋರ್ಗರೆದು ಹರಿಯುತ್ತಿದ್ದು, ನಯನ ಮನೋಹರ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ.

ಕಾವೇರಿ ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿರುವುದರಿಂದ ಪಟ್ಟಣ ಸಮೀಪದ ಗಂಜಾಂನ ನಿಮಿಷಾಂಬಾ ದೇವಾಲಯದ ಬಳಿ ಯಾರೂ ನದಿಗೆ ಇಳಿಯದಂತೆ ಬ್ಯಾರಿಕೇಡ್‌ ಅಳವಡಿಸಲಾಗಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಎರಡು ವಾರಗಳಿಂದಲೂ ಸ್ಥಗಿತಗೊಂಡಿದೆ.

ADVERTISEMENT

ಕೆಆರ್‌ಎಸ್‌ ಜಲಾಶಯಕ್ಕೆ 18 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯ ತನ್ನ ಗರಿಷ್ಠ ಮಟ್ಟ (124.80 ಅಡಿ) ತಲುಪಿದೆ. ಹಾಗಾಗಿ ಒಳ ಬರುವ ಅಷ್ಟೂ ನೀರನ್ನು ಹೊರಗೆ ಬಿಡಲಾಗುತ್ತಿದೆ.

‘ಜಲಾಶಯದಲ್ಲಿ ಸದ್ಯ 49.45 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಅವಧಿಯಲ್ಲಿ 47.16 ಟಿಎಂಸಿ ಅಡಿಗಳಷ್ಟು ನೀರಿತ್ತು’ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ರಾಮಮೂರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.