ADVERTISEMENT

ಮೈಸೂರು: ಜೆಡಿಎಸ್‌ಗೆ ಮೇಯರ್ ಸ್ಥಾನ ಬಿಟ್ಟುಕೊಡಲು ಒತ್ತಾಯ

ಬಿಡದಿಯ ಈಗಲ್‌ಟನ್‌ ರೆಸಾರ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ಸದಸ್ಯರ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 16:40 IST
Last Updated 16 ನವೆಂಬರ್ 2018, 16:40 IST

ಬಿಡದಿ: ಮೈಸೂರು ಮಹಾನಗರ ಪಾಲಿಕೆಯ ಮೇಯರ್‌ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ತನ್ನ ಸದಸ್ಯರನ್ನು ಪ್ರವಾಸಕ್ಕೆ ಕರೆತಂದಿದೆ.

ಅಲ್ಲಿನ ಮಹಾನಗರ ಪಾಲಿಕೆಯ 18 ಜೆಡಿಎಸ್ ಸದಸ್ಯರು ಹಾಗೂ ಬಿಎಸ್ಪಿಯ ಒಬ್ಬ ಸದಸ್ಯ, ಮಾಜಿ ಮೇಯರ್‌ ರವಿಕುಮಾರ್ ನೇತೃತ್ವದಲ್ಲಿ ಶುಕ್ರವಾರ ಇಲ್ಲಿನ ಈಟಲ್‌ಟನ್ ರೆಸಾರ್ಟಿಗೆ ಬಂದಿಳಿದರು. ಅವರಿಗಾಗಿ ಒಟ್ಟು 15 ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ಮೇಯರ್‌, ಉಪ ಮೇಯರ್‌ ಆಯ್ಕೆ ಪ್ರಕ್ರಿಯೆಯು ಶನಿವಾರ ನಡೆಯಲಿದ್ದು, ಬೆಳಿಗ್ಗೆ ಎಲ್ಲ ಸದಸ್ಯರು ಇಲ್ಲಿಂದಲೇ ನೇರವಾಗಿ ಚುನಾವಣೆ ನಡೆಯುವ ಸ್ಥಳಕ್ಕೆ ತೆರಳಲಿದ್ದಾರೆ.

ರೆಸಾರ್ಟ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರವಿಕುಮಾರ್ ‘ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್‌ಗಿಂತ ನಾವೇ ಒಂದು ಸ್ಥಾನ ಮುಂದೆ ಇದ್ದೇವೆ. ಹೀಗಾಗಿ ನಮಗೇ ಮೇಯರ್‌ ಸ್ಥಾನ ಬಿಟ್ಟುಕೊಡುವಂತೆ ಕೋರಿದ್ದೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಈ ಬಗ್ಗೆ ಭರವಸೆ ನೀಡಿದ್ದಾರೆ’ ಎಂದರು. ‘ಎಲ್ಲ ಸದಸ್ಯರೂ ಒಗ್ಗಟ್ಟಾಗಿ ಇದ್ದೇವೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದೇವೆ’ ಎಂದು ಅವರು ತಿಳಿಸಿದರು.

ADVERTISEMENT

‘ಕಳೆದ ಐದು ವರ್ಷ ಮೈಸೂರಿನಲ್ಲಿ ಜೆಡಿಎಸ್‌–ಬಿಜೆಪಿ ಮೈತ್ರಿ ಇದ್ದಾಗಲೂ ನಾವೇ ಮೇಯರ್‌ ಆಗಿದ್ದೆವು. ಅದೇ ರೀತಿ ಈ ಬಾರಿಯೂ ಹುದ್ದೆ ಬಿಟ್ಟುಕೊಡುವಂತೆ ಕಾಂಗ್ರೆಸ್‌ ನಾಯಕರಿಗೆ ಮನವಿ ಸಲ್ಲಿಸಿದ್ದೇವೆ. ಕಾಂಗ್ರೆಸ್‌ಗೆ ಬೆಂಗಳೂರು, ತುಮಕೂರು ಪಾಲಿಕೆಗಳಲ್ಲಿ ಮೇಯರ್‌ ಹುದ್ದೆ ಬಿಟ್ಟುಕೊಟ್ಟಿದ್ದೇವೆ. ಹೀಗಾಗಿ ಇಲ್ಲಿ ಜೆಡಿಎಸ್‌ಗೆ ಅವಕಾಶ ನೀಡಬೇಕು’ ಎಂದರು.

‘ಕಾಂಗ್ರೆಸ್‌–ಜೆಡಿಎಸ್ ಒಗ್ಗಟ್ಟಾಗಿ ಇದ್ದೇವೆ. ಬಿಜೆಪಿ ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಜೆಡಿಎಸ್‌ ವರಿಷ್ಠರು ನಮ್ಮಲ್ಲಿ ಯಾರನ್ನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಿದರೂ ನಾವೆಲ್ಲ ಒಪ್ಪುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.