ADVERTISEMENT

ಮೈಸೂರು, ಬೆಳಗಾವಿಗೆ ರೈಲು ಸಂಚಾರ ಆರಂಭ: ರೈಲು ಹತ್ತಲು ಪ್ರಯಾಣಿಕರ ಹಿಂದೇಟು

​ಪ್ರಜಾವಾಣಿ ವಾರ್ತೆ
Published 22 ಮೇ 2020, 19:45 IST
Last Updated 22 ಮೇ 2020, 19:45 IST

ಬೆಂಗಳೂರು: ಲಾಕ್‌ಡೌನ್ ಘೋಷಣೆಯಾದ ಬಳಿಕ ಇದೇ ಮೊದಲಿಗೆ ಬೆಂಗಳೂರಿನಿಂದ ಮೈಸೂರು ಮತ್ತು ಬೆಳಗಾವಿಗೆ ಪ್ರಯಾಣಿಕರ ರೈಲು ಸಂಚಾರವನ್ನು ನೈರುತ್ಯ ರೈಲ್ವೆ ಆರಂಭಿಸಿದೆ. ಆದರೆ, ರೈಲು ಹತ್ತಲು ಪ್ರಯಾಣಿಕರು ಹಿಂದೇಟು ಹಾಕಿದ್ದು, ಅತೀ ಕಡಿಮೆ ಜನ ಶುಕ್ರವಾರ ಪ್ರಯಾಣ ಮಾಡಿದರು.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್‌ಆರ್‌) ನಿಲ್ದಾಣದಿಂದ ಬೆಳಗಾವಿಗೆ ಶುಕ್ರವಾರ ಬೆಳಿಗ್ಗೆ 8ಕ್ಕೆ ಹೊರಟ ರೈಲಿನಲ್ಲಿ 1,484 ಜನ ಪ್ರಯಾಣಿಸಲು ಅವಕಾಶ ಇತ್ತು. 338 ಮಂದಿ ಆಸನಗಳನ್ನು ಕಾಯ್ದಿರಿಸಿದ್ದರು. ಈ ಪೈಕಿ 176 ಪ್ರಯಾಣಿಸಿದರು.

ಕೆಎಸ್‌ಆರ್‌ ರೈಲು ನಿಲ್ದಾಣದಿಂದ ಮೈಸೂರಿಗೆ ಬೆಳಿಗ್ಗೆ 9.20ಕ್ಕೆ ರೈಲು ಹೊರಟಿತು. 1,415 ಮಂದಿ ಪ್ರಯಾಣಿಸಲು ಅವಕಾಶ ಇದ್ದ ರೈಲಿನಲ್ಲಿ 37 ಮಂದಿ ಪ್ರಯಾಣಿಸಿದರು. ಕೆಂಗೇರಿ ಮತ್ತು ಮಂಡ್ಯದಲ್ಲಿ ರೈಲು ನಿಲುಗಡೆ ಅವಕಾಶ ಇತ್ತು. ಒಟ್ಟು 63 ಜನ ಮೈಸೂರಿನಲ್ಲಿ ಇಳಿದರು. ಮೈಸೂರಿನಿಂದ 1.45ಕ್ಕೆ ಹೊರಟು ಬೆಂಗಳೂರಿಗೆ ಬಂದ ರೈಲಿನಲ್ಲಿ 59 ಮಂದಿ ಪ್ರಯಾಣಿಸಿದರು.

ADVERTISEMENT

ಈ ವಿಶೇಷ ಎಕ್ಸ್‌ಪ್ರೆಸ್ ರೈಲುಮೈಸೂರಿಗೆ ಪ್ರತಿ ದಿನ ಸಂಚರಿಸಲಿದೆ. ಬೆಳಗಾವಿ–ಬೆಂಗಳೂರು ರೈಲು ವಾರದಲ್ಲಿ ಮೂರು ದಿನ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಟಿಕೆಟ್ ಬುಕ್ಕಿಂಗ್ ಕೌಂಟರ್ ಆರಂಭ

ನೈರುತ್ಯ ರೈಲ್ವೆಯು ಶುಕ್ರವಾರದಿಂದ ಪ್ರಮುಖ ನಿಲ್ದಾಣಗಳಲ್ಲಿ ಟಿಕೆಟ್ ಬುಕ್ಕಿಂಗ್ ಕೌಂಟರ್‌ಗಳನ್ನು ಪುನರ್ ಆರಂಭಿಸಿದೆ.

‘ಬೆಳಗಾವಿ, ಬಳ್ಳಾರಿ, ಹುಬ್ಬಳ್ಳಿ, ವಿಜಯಪುರ, ಧಾರವಾಡ, ಹೊಸಪೇಟೆ, ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಯಶವಂತಪುರ, ಕಂಟೋನ್ಮೆಂಟ್, ಬಂಗಾರಪೇಟೆ, ಕೆಂಗೇರಿ, ಕೆ.ಆರ್.ಪುರ, ಮೈಸೂರು, ದಾವಣಗೆರೆ, ಶಿವಮೊಗ್ಗ ಮತ್ತು ಹಾಸನ ರೈಲು ನಿಲ್ದಾಣಗಳಲ್ಲಿ ಟಿಕೆಟ್ ಕೌಂಟರ್‌ಗಳು ಕಾರ್ಯಾರಂಭಗೊಂಡಿವೆ’ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.