ADVERTISEMENT

ಮೈಸೂರು ವಿ.ವಿಶಿಕ್ಷಣ ವಿಭಾಗದ ಎಡವಟ್ಟು:ಎಂ.ಎಡ್‌ ಪ್ರಶ್ನೆ ಪತ್ರಿಕೆ ಪುನರಾವರ್ತನೆ

ಮರುಪರೀಕ್ಷೆ ಸಾಧ್ಯತೆ

ಕೆ.ಓಂಕಾರ ಮೂರ್ತಿ
Published 25 ಡಿಸೆಂಬರ್ 2018, 19:57 IST
Last Updated 25 ಡಿಸೆಂಬರ್ 2018, 19:57 IST
ಮೈಸೂರು ವಿ.ವಿ ಆಡಳಿತ ಭವನ
ಮೈಸೂರು ವಿ.ವಿ ಆಡಳಿತ ಭವನ   

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಎಡವಟ್ಟು ಸಂಭವಿಸಿದ್ದು, ಶಿಕ್ಷಣ ವಿಭಾಗದ ವತಿಯಿಂದ ನಡೆದ ಎಂ.ಎಡ್‌ ಮೊದಲ ಸೆಮಿಸ್ಟರ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸಂಪೂರ್ಣವಾಗಿ ಪುನರಾವರ್ತನೆಗೊಂಡಿದೆ.

‘ಶಿಕ್ಷಣ ಅಧ್ಯಯನ’ ಪಠ್ಯ ವಿಷಯದಲ್ಲಿ 2017ರ ಡಿಸೆಂಬರ್‌ನಲ್ಲಿ ನಡೆದ ಪರೀಕ್ಷೆಗೆ ಬಳಸಿದ ಪ್ರಶ್ನೆಗಳನ್ನು ನಾಲ್ಕು ದಿನಗಳ ಹಿಂದೆ ನಡೆದ ಈ ವರ್ಷದ ಪರೀಕ್ಷೆಗೆ ಮತ್ತೆ ಕೇಳಲಾಗಿದೆ.

ಮೊದಲ ಪ್ರಶ್ನೆಯಿಂದ ಹಿಡಿದು ಕೊನೆಯ ಪ್ರಶ್ನೆವರೆಗೆ ಪ್ರಶ್ನೆ ಪತ್ರಿಕೆ ಯಥಾವತ್ತಾಗಿದೆ. ಪ್ರಶ್ನೆಗಳ ಕ್ರಮಸಂಖ್ಯೆ, ಬಳಸಿದ ವಾಕ್ಯ, ಶಬ್ದವೂ ಬದಲಾಗಿಲ್ಲ. ಡಿಸೆಂಬರ್‌–2017 ಎಂಬುದು ಡಿಸೆಂಬರ್‌–2018 ಎಂದಾಗಿದ್ದು, ಪ್ರಶ್ನೆ ಪತ್ರಿಕೆಯ ಸರಣಿ ಸಂಖ್ಯೆ ಮಾತ್ರ ಬದಲಾಗಿದೆ.

ADVERTISEMENT

ಎರಡೂ ವರ್ಷಗಳ ಪ್ರಶ್ನೆ ಪತ್ರಿಕೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಸಾಧ್ಯತೆಗಳ ಬಗ್ಗೆ ವಿಭಾಗದ ಕೆಲ ವಿದ್ಯಾರ್ಥಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

‘ಕೆಲವೊಮ್ಮೆ ಈ ರೀತಿ ಪುನರಾವರ್ತನೆ ಸಾಮಾನ್ಯ. ಪ್ರಶ್ನೆ ಪತ್ರಿಕೆಗಳ ಮೂರು ಸೆಟ್‌ಗಳನ್ನು ರಚಿಸಲಾಗುತ್ತದೆ. ಒಂದು ಸೆಟ್‌ ತೆರೆಯುತ್ತೇವೆ. ಉಳಿದ ಸೆಟ್‌ಗಳನ್ನು ಮುಂದಿನ ವರ್ಷಕ್ಕೆ ಬಳಸಬಹುದು. ಪಠ್ಯದಲ್ಲಿ ಇರುವ ಪ್ರಶ್ನೆಗಳನ್ನು ಕೇಳಬೇಕಲ್ಲವೇ? ಬೇರೆಯವರಿಗೆ ಇದೇ ರೀತಿಯ ಚಿಂತನೆ ಬಂದಿರಬಹುದು. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ’ ಎಂದು ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಕೆ.ಬಿ.ಪ್ರವೀಣ್‌ ಪ್ರತಿಕ್ರಿಯಿಸಿದರು.

70 ಅಂಕದ ಪ್ರಶ್ನೆ ಪತ್ರಿಕೆ ಇದಾಗಿದ್ದು, 9 ಪ್ರಶ್ನೆ ಇವೆ. 2018–19ನೇ ಶೈಕ್ಷಣಿಕ ಸಾಲಿನ ಎಂ.ಎಡ್‌ ಮೊದಲ ವರ್ಷದಲ್ಲಿ 40 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಮಂಡಳಿ ಹೊಣೆ

‘ಎಲ್ಲಾ ಪ್ರಶ್ನೆಗಳು ಪುನರಾವರ್ತನೆ ಆಗಿರುವುದು ನಿಜವಾಗಿದ್ದರೆ ಅದಕ್ಕೆ ಪರೀಕ್ಷಾ ಮಂಡಳಿಯೇ (ಬಿಒಇ) ಹೊಣೆ. ಪ್ರಶ್ನೆ ಪತ್ರಿಕೆ ರಚಿಸಿದ ಸದಸ್ಯರು ಜವಾಬ್ದಾರಿ ಹೊರಬೇಕು‌. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಕುಲಸಚಿವ (ಪರೀಕ್ಷಾಂಗ) ಪ್ರೊ.ಜೆ.ಸೋಮಶೇಖರ್‌ ತಿಳಿಸಿದರು.

* ಈ ವಿಚಾರ ನನ್ನ ಗಮಕ್ಕೆ ಬಂದಿಲ್ಲ. ಪ್ರಶ್ನೆಗಳು ಯಥಾವತ್ತಾಗಿದ್ದರೆ ಖಂಡಿತ ತಪ್ಪು. ಮರು ಪರೀಕ್ಷೆ ನಡೆಸಲು ವಿಭಾಗಕ್ಕೆ ಸೂಚನೆ ನೀಡುತ್ತೇನೆ

-ಪ್ರೊ.ಜೆ.ಸೋಮಶೇಖರ್‌,ಕುಲಸಚಿವ (ಪರೀಕ್ಷಾಂಗ), ಮೈಸೂರು ವಿ.ವಿ

*ತಪ್ಪು ಸರಿಪಡಿಸಿಕೊಳ್ಳುತ್ತೇವೆ. ಮತ್ತೆ ಈ ರೀತಿ ಆಗಲು ಅವಕಾಶ ನೀಡುವುದಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ

-ಕೆ.ಬಿ.ಪ್ರವೀಣ್‌, ಪ್ರಾಧ್ಯಾಪಕ, ಶಿಕ್ಷಣ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.