ಬೆಂಗಳೂರು: ಮಂಡ್ಯದ ಮೈಶುಗರ್ಸ್ ಕಾರ್ಖಾನೆ ಅಭಿವೃದ್ಧಿಗಾಗಿ, ಹಿಂದೆ ಸರ್ಕಾರವು ₹140 ಕೋಟಿಗೂ ಹೆಚ್ಚು ಅನುದಾನ ನೀಡಿತ್ತು. ಈ ಅನುದಾನವು ದುರ್ಬಳಕೆ ಆಗಿರುವ ಆರೋಪಗಳಿವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ತಿಳಿಸಿದರು.
ವಿಧಾನ ಪರಿಷತ್ತಿನ ಕಲಾಪದಲ್ಲಿ ಮಂಗಳವಾರ ಪ್ರಶ್ನೋತ್ತರದ ವೇಳೆ ಕಾಂಗ್ರೆಸ್‌ನ ಮಧು ಜಿ.ಮಾದೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಆಡಳಿತ ನಡೆಸಿದ್ದ ಹಲವು ಪಕ್ಷಗಳ ಸರ್ಕಾರಗಳು ಮೈಶುಗರ್ಸ್ ಕಾರ್ಖಾನೆಗೆ ಈವರೆಗೆ ₹650 ಕೋಟಿಗೂ ಹೆಚ್ಚು ಅನುದಾನ ನೀಡಿವೆ. ಆ ವೆಚ್ಚದಲ್ಲಿ ಎರಡು ಹೊಸ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬಹುದಿತ್ತು’ ಎಂದರು.
‘ಇಷ್ಟು ದೊಡ್ಡ ಮೊತ್ತದ ಅನುದಾನ ನೀಡಿದ್ದರೂ, ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಪುನಶ್ಚೇತನಗೊಂಡಿಲ್ಲ. ಅನುದಾನ ದುರ್ಬಳಕೆ ಆಗಿರುವ ಬಗ್ಗೆ ತನಿಖೆ ನಡೆಸುತ್ತೇವೆ’ ಎಂದರು.
‘2022–23ರ ಅವಧಿಯಲ್ಲಿ ಕಾರ್ಖಾನೆ ಪುನರಾರಂಭಕ್ಕೆ ಯತ್ನ ಮಾಡಲಾಯಿತಾದರೂ, ನಷ್ಟ ಹೆಚ್ಚಾಯಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ನಂತರ ₹50 ಕೋಟಿ ಅನುದಾನ ನೀಡಿದರು. ಅದನ್ನು ಕಟ್ಟುನಿಟ್ಟಾಗಿ ವೆಚ್ಚ ಮಾಡಿ, ಕಾರ್ಖಾನೆ ಪುನರಾರಂಭ ಮಾಡಲಾಗಿದೆ’ ಎಂದರು.
ಮಧು ಜಿ. ಮಾದೇಗೌಡ ಅವರು, ‘ಕಾರ್ಖಾನೆಯನ್ನು ವಿಸ್ತರಿಸಬೇಕು ಮತ್ತು ಡಿಸ್ಟಿಲರಿಯನ್ನು ಪುನರಾರಂಭ ಮಾಡಬೇಕು’ ಎಂದು ಒತ್ತಾಯ ಮಾಡಿದರು. ಅದಕ್ಕೆ ಸಚಿವರು, ‘ಈಗ ಇರುವ ಬಾಯ್ಲರ್ ಅನ್ನು ಸರಿಪಡಿಸಿದರೆ ಸಾಕಾಗುತ್ತದೆ. ಅದನ್ನು ಮೊದಲು ಮಾಡಿ ತೋರಿಸಿ. ನಂತರ ಡಿಸ್ಟಿಲರಿಯನ್ನು ಆರಂಭಿಸುತ್ತೇವೆ’ ಎಂದರು.
‘ಕಾರ್ಖಾನೆಯ ಆವರಣದಲ್ಲೇ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಲಾಗಿದ್ದು, 2024–25ರಲ್ಲಿ 1.57 ಕೋಟಿ ಯೂನಿಟ್ ಉತ್ಪಾದಿಸಲಾಗಿದೆ. 71.83 ಲಕ್ಷ ಯೂನಿಟ್‌ಗಳನ್ನು ಚೆಸ್ಕಾಂಗೆ ಮಾರಾಟ ಮಾಡಿ, ₹4.33 ಕೋಟಿ ಆದಾಯ ಗಳಿಸಲಾಗಿದೆ’ ಎಂದು ಸದನಕ್ಕೆ ಮಾಹಿತಿ ನೀಡಿದರು.
ಸಚಿವ ಹೇಳಿದ್ದು...
* ₹140 ಕೋಟಿಯಲ್ಲಿ ಯಾವ ಅಭಿವೃದ್ಧಿ ಕಾರ್ಯವೂ ಆಗಿಲ್ಲ. ಯಾವುದಕ್ಕೆ ವೆಚ್ಚವಾಗಿದೆ ಎಂಬ ವಿವರ ಇಲ್ಲ
* ಮೈಶುಗರ್ಸ್‌ಗೆ ಒಟ್ಟು ₹650 ಕೋಟಿ ನೀಡಿದ್ದು, ಅದರಲ್ಲಿ ಎರಡು ಕಾರ್ಖಾನೆ ಆರಂಭಿಸಬಹುದಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.