ADVERTISEMENT

ಮೈಸೂರು: ಅಶಕ್ತರ ಮನೆ ಬಾಗಿಲಿಗೆ ನಿತ್ಯ ಬರುತ್ತಿದೆ ಊಟ

ಉದ್ಯಮಿಗಳು ರಚಿಸಿಕೊಂಡಿರುವ ಸಮಿತಿ, 55 ಮಂದಿಗೆ ನಿತ್ಯ ಭೋಜನ

ಕೆ.ಓಂಕಾರ ಮೂರ್ತಿ
Published 2 ಅಕ್ಟೋಬರ್ 2018, 20:01 IST
Last Updated 2 ಅಕ್ಟೋಬರ್ 2018, 20:01 IST
ವೃದ್ಧೆಯ ಮನೆ ಬಾಗಿಲಿಗೆ ಆಹಾರ ಪೊಟ್ಟಣ ಪೂರೈಕೆ
ವೃದ್ಧೆಯ ಮನೆ ಬಾಗಿಲಿಗೆ ಆಹಾರ ಪೊಟ್ಟಣ ಪೂರೈಕೆ   

ಮೈಸೂರು: ನಿರ್ಗತಿಕ, ಅಶಕ್ತ, ನಿರ್ಲಕ್ಷಿತ, ಅನಾರೋಗ್ಯಕ್ಕೆ ಒಳಗಾದ ವಯೋವೃದ್ಧರ ಮನೆಬಾಗಿಲಿಗೆ ತೆರಳಿ ನಿತ್ಯ ಊಟ ಪೂರೈಸುವ ಸೇವಾ ಕೈಂಕರ್ಯ ಸಾಂಸ್ಕೃತಿಕ ನಗರಿಯಲ್ಲಿ ಸದ್ದಿಲ್ಲದೇ ನಡೆಯುತ್ತಿದೆ.

ಉದ್ಯಮಿಗಳು, ವಕೀಲರು, ಲೆಕ್ಕ ಪರಿಶೋಧಕರು ಸೇರಿ ರಚಿಸಿಕೊಂಡಿರುವ ‘ಹರೇ ಶ್ರೀನಿವಾಸ ಸಮಿತಿ’ ಈ ಸೇವೆ ಕಲ್ಪಿಸುತ್ತಿದೆ. ಈ ಕಾರ್ಯಕ್ಕೆ ‘ತೃಪ್ತಿ ಮೀಲ್ಸ್‌ ಪ್ರಾಜೆಕ್ಟ್‌’ ಎಂದು ಹೆಸರಿಟ್ಟುಕೊಂಡಿದ್ದಾರೆ. ಆರು ತಿಂಗಳ ಹಿಂದೆ ಆರಂಭವಾದ ಈ ಯೋಜನೆಯ ಫಲವನ್ನು 55 ವೃದ್ಧರು ಪಡೆಯುತ್ತಿದ್ದಾರೆ. ನಿತ್ಯ ಮಧ್ಯಾಹ್ನ ಹಾಗೂ ರಾತ್ರಿ ಭೋಜನ ಪೂರೈಸಲಾಗುತ್ತಿದೆ.

ಮಕ್ಕಳ ಆರೈಕೆಯಿಂದ ವಂಚಿತರಾದ ಪೋಷಕರು, ಅನಾರೋಗ್ಯಕ್ಕೆ ಒಳಗಾಗಿ ಹಾಸಿಗೆ ಹಿಡಿದವರು, ಮನೆಯೂ ಇಲ್ಲದೆ ಗುಡಿಸಿಲಿನಲ್ಲಿ ಜೀವನ ಸಾಗಿಸುವ ಅಶಕ್ತರನ್ನು ಗುರುತಿಸಿ ಈ ಸೇವೆ ಒದಗಿಸಲಾಗುತ್ತಿದೆ.

ADVERTISEMENT

‘ವಿದ್ಯಾವಂತರು, ಹಣವಂತರು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕುತ್ತಿದ್ದಾರೆ. ತೀರಾ ಸಂಕಷ್ಟದಲ್ಲಿರುವ ಇಂಥವರಿಗೆ ನೆರವು ನೀಡಬೇಕು ಎಂಬ ಉದ್ದೇಶದಿಂದ ಈ ಯೋಜನೆ ಆರಂಭಿಸಿದ್ದೇವೆ’ ಎಂದು ಸಮಿತಿ ಅಧ್ಯಕ್ಷ ಎಚ್‌.ಕೆ.ಗುಂಡುವೆಂಕಟೇಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶ್ರೀರಾಂಪುರ, ಕುವೆಂಪುನಗರ, ವಿದ್ಯಾರಣ್ಯಪುರಂ, ಮೇಟಗಳ್ಳಿ, ಎನ್‌.ಆರ್‌.ಮೊಹಲ್ಲಾ, ಕುಂಬಾರಕೊಪ್ಪಲು, ಸಿದ್ಧಾರ್ಥ ಬಡಾವಣೆ, ಶಿವರಾಂಪೇಟೆ ಸೇರಿದಂತೆ ಮೈಸೂರಿನ ವಿವಿಧ ಬಡಾವಣೆಗಳಲ್ಲಿರುವ ವೃದ್ಧರ ಮನೆಗೆ ಊಟ ಪೂರೈಸಲಾಗುತ್ತಿದೆ. ಮಧ್ಯಾಹ್ನ ಅನ್ನ, ಸಾಂಬಾರ್‌, ಮೊಸರು, ಮುದ್ದೆಯನ್ನು ಪ್ರತ್ಯೇಕವಾಗಿ ಪೊಟ್ಟಣದಲ್ಲಿ ಹಾಕಿ ನೀಡಲಾಗುತ್ತಿದೆ. ರಾತ್ರಿ ರವೆ ಇಡ್ಲಿ, ಚಪಾತಿ, ಪಲ್ಯ, ಪಲಾವ್‌, ಉಪ್ಪಿಟ್ಟು, ಅವಲಕ್ಕಿ, ನುಚ್ಚಿನ ಬಿಸಿಬೇಳೆಬಾತ್‌– ಹೀಗೆ ನಿತ್ಯ ಒಂದೊಂದು ತಿಂಡಿ ಪೂರೈಸಲಾಗುತ್ತಿದೆ. ಊಟ ಪೂರೈಸಲು ಒಂದು ಕುಟುಂಬಕ್ಕೆ ಗುತ್ತಿಗೆ ನೀಡಲಾಗಿದೆ. ಅವರು ವಾಹನದಲ್ಲಿ ಮನೆಮನೆಗೆ ಪೂರೈಕೆ ಮಾಡುತ್ತಾರೆ.

‘ಊಟ ಒದಗಿಸಲು ಸಮಿತಿಯು ತಿಂಗಳಿಗೆ ಸುಮಾರು ₹ 1.20 ಲಕ್ಷ ತೆಗೆದಿಡುತ್ತಿದೆ. ಈ ಕಾರ್ಯ ಮೆಚ್ಚಿ ಅನೇಕ ದಾನಿಗಳು ಹಣಕಾಸಿನ ಸಹಾಯ ಮಾಡುತ್ತಿದ್ದಾರೆ. ಕೆಲವರು ತಮ್ಮ ಜನ್ಮದಿನ, ವಿವಾಹ ವಾರ್ಷಿಕೋತ್ಸವಕ್ಕೆ ಬಂದು ಹಣ ನೀಡಿ ಹೋಗುತ್ತಾರೆ’ ಎಂದು ಸಮಿತಿ ಕಾರ್ಯದರ್ಶಿ ಎಂ.ಎನ್‌.ಮೋಹನ್‌ ಗುಪ್ತ ಹೇಳಿದರು. ‌

ಸಮಿತಿಯಲ್ಲಿ 81 ಟ್ರಸ್ಟಿಗಳು ಇದ್ದಾರೆ. ಇವರೆಲ್ಲಾ ಪ್ರತ್ಯೇಕವಾಗಿ ತಂಡ ಮಾಡಿಕೊಂಡು ನಗರದಲ್ಲಿ ಸುತ್ತಾಡಿ ಅಶಕ್ತರನ್ನು ಗುರುತಿಸುತ್ತಿದ್ದಾರೆ.

‘ನನಗೀಗ 88 ವರ್ಷ. ಒಬ್ಬಂಟಿಯಾಗಿ ಗುಡಿಸಲಿನಲ್ಲಿ ಬದುಕುತ್ತಿದ್ದೇನೆ. ಮಕ್ಕಳು ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ಇದ್ದಾರೆ. ಮನೆಗೆ ಹೋದರೆ ಸೇರಿಸಲ್ಲ. ಉಚಿತ ಊಟದಿಂದ ನನ್ನ ಬದುಕು ಸಾಗುತ್ತಿದೆ’ ಎಂದು ಯೋಜನೆಯ ಲಾಭ ಪಡೆಯುತ್ತಿರುವ ಅರವಿಂದನಗರದ ವೃದ್ಧೆ ಜಯಲಕ್ಷ್ಮಮ್ಮ ನುಡಿದರು.

ಸಂಪರ್ಕಕ್ಕೆ ಮೊ: 9448069229/ 9980600807

ನಾನೇನು ತಪ್ಪು ಮಾಡಿದೆ?

‘ನನ್ನನ್ನು ಮಕ್ಕಳು ಒಬ್ಬಂಟಿಯಾಗಿ ಬಿಟ್ಟು ಹೋಗಿ ವರ್ಷಗಳೇ ಕಳೆದಿವೆ. ನನಗೆ ಕಷ್ಟವಾದರೂ ಪರವಾಗಿಲ್ಲ, ಮಕ್ಕಳು ಚೆನ್ನಾಗಿರಲಿ’ ಎಂದು ಹೇಳಿದ ಪದ್ಮಾಕ್ಷಿ ಅವರ ಕಂಗಳು ಜಿನುಗಿದವು.

90 ವರ್ಷದ ಶ್ರೀರಾಂಪುರದ ಈ ಮಹಿಳೆ ದೇಗುಲದಲ್ಲಿ ಕಸ ಗುಡಿಸಿ ಭಕ್ತಾದಿಗಳು ನೀಡುವ ಪುಡಿಗಾಸಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ಅವರಿಗೆ ಎರಡೊತ್ತಿನ ಊಟಕ್ಕೆ ಕೊರತೆಯಾಗಿಲ್ಲ. ಇದಕ್ಕೆ ಕಾರಣ ತೃಪ್ತಿ ಮೀಲ್ಸ್‌ ಪ್ರಾಜೆಕ್ಟ್‌. ಇಂಥ ಹಲವು ವೃದ್ಧರಿಗೆ ಸಮಿತಿ ಆಸರೆಯಾಗಿದೆ.

*****

ಮಕ್ಕಳು ತೊರೆದ ವೃದ್ಧ ಪೋಷಕರ ನೋವು ಕಂಡು ಈ ಕಾರ್ಯಕ್ಕೆ ಕೈಹಾಕಿದ್ದೇವೆ. ಧರ್ಮ, ಜಾತಿ ನೋಡದೆ ಊಟ ಪೂರೈಸುತ್ತಿದ್ದೇವೆ.
– ಎಚ್‌.ಕೆ.ಗುಂಡುವೆಂಕಟೇಶ್‌ ಕುಮಾರ್‌, ಅಧ್ಯಕ್ಷ, ಹರೇ ಶ್ರೀನಿವಾಸ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.