50:50ರ ಅನುಪಾತದಲ್ಲಿ ಅಕ್ರಮವಾಗಿ 1,094 ನಿವೇಶನ ಹಂಚಿಕೆ | ಮೈಸೂರಿನ ಇಬ್ಬರು, ಬೆಂಗಳೂರಿನ ಒಬ್ಬರು ಉದ್ಯಮಿಗಳಿಗೆ ಸೇರಿದ ಆಸ್ತಿ | ಅಕ್ರಮದಲ್ಲಿ ಹಿಂದಿನ ಆಯುಕ್ತ ದಿನೇಶ್ ಕುಮಾರ್ ಭಾಗಿ ಎಂದು ಉಲ್ಲೇಖ
ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇ.ಡಿ) ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಅಧಿಕಾರಿಗಳಿಗೆ ಸೇರಿದ ₹300 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನಗಳನ್ನು ಹಂಚಿಕೆ ಮಾಡಿದ್ದ ಪ್ರಕರಣದ ತನಿಖೆಯನ್ನು ಇ.ಡಿ ನಡೆಸುತ್ತಿದೆ. 50:50ರ ಅನುಪಾತದಲ್ಲಿ ಅಕ್ರಮವಾಗಿ 1,094 ನಿವೇಶನಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು, ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಸಂಬಂಧಿಕರಿಗೆ ಹಂಚಿಕೆ ಮಾಡಿರುವುದನ್ನು ತನಿಖೆ ವೇಳೆ ಪತ್ತೆ ಮಾಡಿತ್ತು.
ಈ ಪ್ರಕರಣದ ತನಿಖೆಯ ಭಾಗವಾಗಿ ಇ.ಡಿ ಇದೇ ಮೊದಲ ಬಾರಿಗೆ ಭಾರಿ ಮೌಲ್ಯದ ಆಸ್ತಿಗಳನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ. ‘50:50ರ ಅನುಪಾತದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದ್ದರ ಸಂಬಂಧ 142 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ಇ.ಡಿ ತಿಳಿಸಿದೆ.
‘ಮುಡಾ ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳ ಮಾಲೀಕರು ಮತ್ತು ಸ್ವಾಧೀನಪಡಿಸಿಕೊಳ್ಳದೇ ಬಳಸಿಕೊಂಡ ಜಮೀನುಗಳ ಮಾಲೀಕರಿಗೆ ಪರಿಹಾರ ರೂಪದಲ್ಲಿ ಸಾವಿರಾರು ನಿವೇಶನಗಳನ್ನು ನೀಡಲಾಗಿದೆ. ಮೂಲ ಮಾಲೀಕರಿಂದ ಅಂತಹ ಜಮೀನುಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ತಮ್ಮ ಹೆಸರಿಗೆ ಜಿಪಿಎ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಪರಿಹಾರ ರೂಪದ ನಿವೇಶನಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಪಡೆದುಕೊಂಡಿದ್ದಾರೆ’ ಎಂದು ಇ.ಡಿಯ ಪ್ರಕಟಣೆ ತಿಳಿಸಿದೆ.
‘ಪರಿಹಾರ ರೂಪದ ನಿವೇಶನಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಹೆಚ್ಚಿನ ದರಕ್ಕೆ ಮಾರಾಟ ಮಾಡಿ ಲಾಭ ಮಾಡಿಕೊಂಡಿದ್ದಾರೆ. ಆ ಹಣವನ್ನು ಸಹಕಾರ ಸಂಘಗಳು, ಬಡಾವಣೆಗಳು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಮುಡಾ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅವರೂ ಈ ರೀತಿ ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ’ ಎಂದು ವಿವರಿಸಿದೆ.
‘ಮೈಸೂರಿನ ಇಬ್ಬರು, ಬೆಂಗಳೂರಿನ ಒಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗಳು, ಮುಡಾ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಿರಾಸ್ತಿಗಳನ್ನೇ ಹೆಚ್ಚಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕೆಲ ಖಾಸಗಿ ವ್ಯಕ್ತಿಗಳ ಆಸ್ತಿಗಳೂ ಇದರಲ್ಲಿವೆ. ಮುಡಾ ನೀಡಿದ್ದ ಪರಿಹಾರ ನಿವೇಶನಗಳು, ಅವುಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಖರೀದಿಸಿದ ಜಮೀನು ಮತ್ತು ವಾಣಿಜ್ಯ ಕಟ್ಟಡಗಳು ಇದರಲ್ಲಿ ಸೇರಿವೆ’ ಎಂದು ಇ.ಡಿ ಮೂಲಗಳು ಮಾಹಿತಿ ನೀಡಿವೆ.
‘ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಈಗಾಗಲೇ ಪತ್ತೆ ಮಾಡಿರುವ ಅಕ್ರಮ ಚರಾಸ್ತಿಗಳು ಮತ್ತು ಇನ್ನಷ್ಟು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ನಟೇಶ್ ಸೂಚನೆಯಂತೆ ಸಿ.ಎಂ. ಪತ್ನಿಗೆ ನಿವೇಶನ
‘ಮುಡಾದ ಹಿಂದಿನ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಅವರ ಸೂಚನೆಯಂತೆಯೇ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು’ ಎಂದು ಇ.ಡಿ ಹೇಳಿದೆ.
‘ಪಾರ್ವತಿ ಅವರ ಸೋದರ ಮಲ್ಲಿಕಾರ್ಜುನ ಸ್ವಾಮಿ ಅವರು ₹3.24 ಲಕ್ಷಕ್ಕೆ ಖರೀದಿಸಿದ್ದ ಜಮೀನಿಗೆ ಪರಿಹಾರವಾಗಿ ಪಡೆದುಕೊಂಡ 14 ನಿವೇಶನಗಳ ಮಾರುಕಟ್ಟೆ ಮೌಲ್ಯ ಅಂದಾಜು ₹56 ಕೋಟಿಯಷ್ಟಾಗುತ್ತದೆ. ಇದೇ ರೀತಿ ರಿಯಲ್ ಎಸ್ಟೇಟ್ ಉದ್ಯಮಿಗಳೂ ಅತ್ಯಂತ ಕಡಿಮೆ ಮೊತ್ತಕ್ಕೆ ಜಿಪಿಎ ಪಡೆದುಕೊಂಡು ನೂರಾರು ಕೋಟಿ ಲಾಭ ಮಾಡಿಕೊಂಡಿದ್ದಾರೆ’ ಎಂದು ವಿವರಿಸಿದೆ.
ಬಿಬಿಎಂಪಿ: ಟಿಡಿಆರ್ ಮಾಹಿತಿ ಕೇಳಿದ ಇ.ಡಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊಳವೆಬಾವಿ ಮತ್ತು ಆರ್‌ಒ ನೀರು ಶುದ್ಧೀಕರಣ ಘಟಕದಲ್ಲಿನ ಅಕ್ರಮ ಆರೋಪದ ತನಿಖೆ ನಡೆಸುತ್ತಿರುವ ಇ.ಡಿ, ತನಿಖೆಯನ್ನು ರಸ್ತೆ ವಿಸ್ತರಣೆ ಕಾಮಗಾರಿಗಳಿಗೂ ವಿಸ್ತರಿಸಿದೆ.
ಈ ಸಂಬಂಧ ಮಾಹಿತಿ ಇ.ಡಿ ಅಧಿಕಾರಿಗಳು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಅದರ ಪ್ರಕಾರ, ಬಿಬಿಎಂಪಿಯ ವಿವಿಧ ವಲಯಗಳಲ್ಲಿ 2005ರಿಂದ 2015ರವರೆಗಿನ ಭೂಸ್ವಾಧೀನ ಮತ್ತು ಟಿಡಿಆರ್ ನೀಡಿದ ಮಾಹಿತಿಯನ್ನು ಕೊಡುವಂತೆ ಇ.ಡಿ. ಅಧಿಕಾರಿಗಳಿಗೆ ನೀಡಿದ್ದಾರೆ. ಈ ಬಗ್ಗೆ ವಿವರವಾದ ದಾಖಲೆಗಳನ್ನು ಒದಗಿಸುವಂತೆ ಆಯುಕ್ತರು, ಎಂಟು ವಲಯಗಳ ಜಂಟಿ ಆಯುಕ್ತರಿಗೆ ಸೂಚನೆ ರವಾನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.