ADVERTISEMENT

‘ಮಾತ್ರೆ ಅದಲು–ಬದಲು ಆರೋಗ್ಯದಲ್ಲಿ ಏರುಪೇರು’

ಆಸ್ಪತ್ರೆಯಿಂದ ಮನೆಗೆ ಹೋದ ಎನ್‌.ಆರ್. ಸಂತೋಷ್

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 21:57 IST
Last Updated 30 ನವೆಂಬರ್ 2020, 21:57 IST

ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ (31), ಎಂ.ಎಸ್.ರಾಮಯ್ಯ ಆಸ್ಪತ್ರೆಯಿಂದ ಸೋಮವಾರ ಬೆಳಿಗ್ಗೆ ಮನೆಗೆ ಹೋಗಿದ್ದಾರೆ.

ಡಾಲರ್ಸ್ ಕಾಲೊನಿಯಲ್ಲಿರುವ ತಮ್ಮ ಮನೆಯಲ್ಲಿ 12 ನಿದ್ರೆ ಮಾತ್ರೆ ಸೇವಿಸಿ ಪ್ರಜ್ಞೆ ಕಳೆದುಕೊಂಡಿದ್ದರು ಎನ್ನಲಾಗಿದ್ದ ಸಂತೋಷ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಿ ವಾರ್ಡ್‌ಗೆ ಸ್ಥಳಾಂತರಿಸಿದ್ದ ಸಂತೋಷ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಅಂತಿಮ ತಪಾಸಣೆ ನಡೆಸಿದ್ದ ವೈದ್ಯರು, ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿದ್ದಾರೆ.

ADVERTISEMENT

ಮನೆಗೆ ಹೋಗುವ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಸಂತೋಷ್, 'ರಾಜಕೀಯದಲ್ಲಿ ಒತ್ತಡಗಳು ಸಾಮಾನ್ಯ. ಅಷ್ಟಕ್ಕೇ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ನಾನಲ್ಲ. ಅಜೀರ್ಣ ಸಂಬಂಧಿತ ಮಾತ್ರೆ ತೆಗೆದುಕೊಳ್ಳುವ ಬದಲು, ನಿದ್ರೆ ಮಾತ್ರೆ ತೆಗೆದುಕೊಂಡಿದ್ದೆ ಇಷ್ಟಕ್ಕೆಲ್ಲ ಕಾರಣ’ ಎಂದರು.

‘ನೀವು 12 ನಿದ್ರೆ ಮಾತ್ರೆಗಳನ್ನು ಸೇವಿಸಿದ್ದಾಗಿ ವೈದ್ಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಸಂತೋಷ್, 'ನನಗೆ ಮೊದಲಿನಿಂದಲೂ ನಿದ್ರೆ ಸಮಸ್ಯೆ ಇದೆ. ಹೀಗಾಗಿ, ಆಗಾಗ ನಿದ್ರೆ ಮಾತ್ರೆ ತೆಗೆದುಕೊಳ್ಳುತ್ತಿದ್ದೆ’ ಎಂದಷ್ಟೇ ಹೇಳಿದರು. 12 ಮಾತ್ರೆ ಬಗ್ಗೆ ಮಾತನಾಡಲಿಲ್ಲ.

‘ಮೂರು ದಿನದ ಹಿಂದೆ ಮದುವೆಯೊಂದಕ್ಕೆ ಹೋಗಿದ್ದೆ. ಅಲ್ಲಿಯ ಊಟದಿಂದ ಅಜೀರ್ಣ ಸಮಸ್ಯೆ ಉಂಟಾಗಿತ್ತು. ಅದಕ್ಕೆ ಸಂಬಂಧಪಟ್ಟ ಮಾತ್ರೆ ಬದಲು ನಿದ್ರೆ ಮಾತ್ರೆ ತೆಗೆದುಕೊಂಡಿದ್ದರಿಂದ ಆರೋಗ್ಯದಲ್ಲಿ ಏರುಪೇರು ಆಯಿತು. ಗಾಬರಿಗೊಂಡ ಪತ್ನಿ, ಆಸ್ಪತ್ರೆಗೆ ದಾಖಲಿಸಿದರು. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ’ ಎಂದೂ ತಿಳಿಸಿದರು.

ತಮ್ಮ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

ಬಿಎಸ್‌ವೈ ಬಗ್ಗೆ ಮಾತನಾಡುವ ಮುನ್ನ ಯೋಚಿಸಿ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವ ಮುನ್ನ ಹತ್ತಾರು ಬಾರಿ ಯೋಚಿಸಬೇಕು. ಅವರ ಬಗ್ಗೆ ಮಾತನಾಡುವುದು, ಮನೆ ಮುಂದೆ 300 ಜನರನ್ನು ಸೇರಿಸಿ ಗೊಂದಲ ಎಬ್ಬಿಸಿದಷ್ಟು ಸುಲಭವಲ್ಲ. ನಾನು ಕರೆದರೆ, ಬಿಎಸ್‌ವೈ ಪರವಾಗಿ ಸಾವಿರಾರು ಮಂದಿ ಬೆಂಗಳೂರಿಗೆ ಬಂದಿಳಿಯುತ್ತಾರೆ’ ಎಂದು ಡಿ.ಕೆ. ಶಿವಕುಮಾರ್‌ಗೆ ತಿರುಗೇಟು ನೀಡಿದರು.

‘ನಾನು ರೋಗಿ ಬದಲು ರೋಗದ ವಿರುದ್ಧ ಹೋರಾಡುವವ. ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಅಧ್ಯಕ್ಷರಿಗೆ ಸೂಕ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಅವರಿಗೆ ಏನಾಗಿದೆ ಎಂಬುದನ್ನು ತಿಳಿಯಬೇಕು’ ಎಂದೂ ಸಂತೋಷ್‌ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.