ADVERTISEMENT

ನಂದನಹಳ್ಳಿ ರವಿ ನನ್ನ ಪುತ್ರನ ಸಮಾನ, ಹುಸಿಕೋಪದಿಂದ ಹೊಡೆದೆ: ಸಿದ್ದರಾಮಯ್ಯ 

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 16:27 IST
Last Updated 4 ಸೆಪ್ಟೆಂಬರ್ 2019, 16:27 IST
   

ಬೆಂಗಳೂರು: ಕಾಂಗ್ರೆಸ್‌ ಕಾರ್ಯಕರ್ತ ಎನ್ನಲಾದ ನಂದನಹಳ್ಳಿ ರವಿ ಎಂಬುವವರ ಕಪಾಳಕ್ಕೆ ಹೊಡೆದ ಪ್ರಸಂಗದ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಟ್ವೀಟ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಘಟನೆ ಬಗ್ಗೆ ನಂದನಹಳ್ಳಿ ರವಿ ಅವರೇ ನೀಡಿದ ಹೇಳಿಕೆಯ ವಿಡಿಯೊವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ‘ನನಗೆ‌ ಪುತ್ರ ಸಮಾನನಾದ ನಂದನಹಳ್ಳಿ ರವಿ ನಾನು ಬೆಳೆಸಿದ ಯುವನಾಯಕ, ಇಂತಹ ನೂರಾರು ಯುವಕರು ನನ್ನ ಜತೆ ಇರುತ್ತಾರೆ. ಅವರ ಜೊತೆ ಪ್ರೀತಿ-ಕೋಪದ ಸಂಬಂಧ ನನ್ನದು.‌ ಅವನಿಗೆ ಹುಸಿಕೋಪದಿಂದ ಕೆನ್ನೆಗೆ ಹೊಡೆದಿದ್ದೆ. ಅದಕ್ಕೆ ವಿಪರೀತಾರ್ಥ ಕಲ್ಪಿಸುವ ಅಗತ್ಯ ಇಲ್ಲ. ರವಿಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾನೆ,’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಬುಧವಾರ ಬೆಳಗ್ಗೆ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ ಅವರು ಮಾತು ಮುಗಿಸಿ ಹೋಗುತ್ತಿರುವಾಗ, ನಂದನಹಳ್ಳಿ ರವಿ ಅವರು ಯಾರಿಗೋ ಕರೆ ಮಾಡಿ ಫೋನ್‌ ಅನ್ನು ಸಿದ್ದರಾಮಯ್ಯ ಅವರ ಕೈಗಿಟ್ಟಿದ್ದರು. ಇದರಿಂದ ಕೋಪಗೊಂಡ ಸಿದ್ದರಾಮಯ್ಯ, ರವಿ ಕೆನ್ನೆಗೆ ಒಂದು ಏಟು ಕೊಟ್ಟಿದ್ದರು. ಈ ದೃಶ್ಯ ವೈರಲ್‌ ಆಗುವುದರ ಜತೆಗೇ, ಮಾಧ್ಯಮಗಳಲ್ಲಿ ವರದಿಯೂ ಆಗಿತ್ತು. ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲೂ ಪ್ರಸಾರಗೊಂಡಿತ್ತು.

ಈ ಪ್ರಸಂಗ ವಿವಾದದ ರೂಪ ಪಡೆಯುತ್ತಿದ್ದಂತೆ ಪ್ರಜಾವಾಣಿಯೊಂದಿಗೆ ಮಾತನಾಡಿದ್ದ ನಂದನಹಳ್ಳಿ ರವಿ, ಸಿದ್ದರಾಮಯ್ಯ ಅವರು ನನಗೆ ತಂದೆ ಸಮಾನ. ನನ್ನ ಗುರುಗಳು, ಹಿರಿಯರು. ಅವರ ಮಾರ್ಗದರ್ಶನದಿಂದ ನಾನು ಚೆನ್ನಾಗಿ ಬದುಕಿದ್ದೀನಿ. ಅವರ ಆಶೀರ್ವಾದ ಇದೆ. ಅವರು ಹೊಡೆದ್ರೂ ಏನೂ ಬೇಜಾರಿಲ್ಲ. ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಬೇಡಿ. ಸಿದ್ದರಾಮಯ್ಯ ಜತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರು ಸಾಕಿದ ಮಗನಾಗಿದ್ದೇನೆ ಹೊರತು ಇನ್ಯಾವುದೇ ಸಮಸ್ಯೆ ಇರುವುದಿಲ್ಲ,’ ಎಂದು ಹೇಳಿದ್ದಾರೆ. ಇದೇ ವಿಡಿಯೋವನ್ನೇ ಉಲ್ಲೇಖಿಸಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.