ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದಂತೆ ಒಳಮೀಸಲಾತಿ ಜಾರಿಗಾಗಿ ನ್ಯಾ. ನಾಗಮೋಹನದಾಸ್ ವರದಿಯನ್ನು ಆ.16ರಂದು ಅಂಗೀಕರಿಸಿ ಅನುಷ್ಠಾನಕ್ಕೆ ತರಬೇಕು ಎಂದು ‘ಸಾಮಾಜಿಕ ನ್ಯಾಯಕ್ಕಾಗಿ ಸಮಾನ ಮನಸ್ಕರು’ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಬುಧವಾರ ನಡೆದ ಸಭೆಯಲ್ಲಿ ಸಾಹಿತಿಗಳು, ಚಿಂತಕರು, ಶಿಕ್ಷಣ ತಜ್ಞರು, ದಲಿತ ಚಳವಳಿಯ ಮುಖಂಡರು, ಪ್ರಾಧ್ಯಾಪಕರು, ಲಿಂಗತ್ವ ಅಲ್ಪಸಂಖ್ಯಾತರು, ವಿದ್ಯಾರ್ಥಿ ಸಂಘಟನೆಗಳ ನಾಯಕರು ಹಾಗೂ ಒಳಮೀಸಲಾತಿ ಪರ ಹೋರಾಟಗಾರರು ಭಾಗವಹಿಸಿದ್ದರು.
ನ್ಯಾ. ನಾಗಮೋಹನ್‌ದಾಸ್ ಆಯೋಗ ನೀಡಿರುವ ವರದಿಯಲ್ಲಿ ತಾಂತ್ರಿಕವಾಗಿ ಏನೇ ಸಮಸ್ಯೆ ಇದ್ದರೂ ತಾತ್ವಿಕವಾಗಿ ಸರಿ ಇದೆ. ಒಳ ಮೀಸಲಾತಿ ಬಗ್ಗೆ ಖಚಿತ ನಿಲುವು ತಳೆದು ಜಾರಿ ಮಾಡಬೇಕು ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
‘ನ್ಯಾ. ಸದಾಶಿವ ಆಯೋಗದ ವರದಿ ಹಾಗೂ ಮಾಧುಸ್ವಾಮಿ ವರದಿಗೆ ಹೋಲಿಸಿದರೆ, ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಬಹುತೇಕರಿಗೆ ಒಪ್ಪಿತವಾಗಿದೆ’ ಎಂದು ಪ್ರಾಧ್ಯಾಪಕ ರವಿಕುಮಾರ್ ಬಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಯಾವುದೇ ಸಮೀಕ್ಷೆಗಳು ಶೇಕಡ ನೂರರಷ್ಟು ಸರಿ ಇರುವುದಿಲ್ಲ. ಈ ವರದಿಯನ್ನು ದತ್ತಾಂಶ ಸಂಗ್ರಹಿಸಿ ತಯಾರಿಸಲಾಗಿದೆ. ತಪ್ಪುಗಳಿದ್ದರೆ ಸರಿಪಡಿಸಲು ಅವಕಾಶ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ನಕಾರಾತ್ಮಕವಾಗಿ ಪ್ರಚಾರ ಮಾಡುವ ಬದಲು ಎಲ್ಲರೂ ಒಗ್ಗಟ್ಟಾಗಿ ವರದಿ ಜಾರಿಗೆ ಒತ್ತಾಯಿಸಬೇಕು ಎಂದು ಚಿಂತಕ ಸಿ.ಜಿ. ಲಕ್ಷ್ಮೀಪತಿ ಆಗ್ರಹಿಸಿದರು.
ಒಳಮೀಸಲಾತಿ ವಿವಾದವನ್ನು ಮುಂದಿಟ್ಟುಕೊಂಡು ಸಮುದಾಯಗಳನ್ನು ಒಡೆಯುವುದಕ್ಕೆ ಕೋಮುವಾದಿಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಅದಕ್ಕಾಗಿ ನಮ್ಮಲ್ಲೇ ಕೆಲವರನ್ನು ಬಳಸಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಪ್ರಭುತ್ವ ನಿಲುವು ಬದಲಾಯಿಸಿದರೆ ಸಮುದಾಯಗಳಿಗೆ ನಷ್ಟ ಉಂಟಾಗಲಿದೆ ಎಂದು ಅಧ್ಯಾಪಕ ಹುಲಿಕುಂಟೆ ಮೂರ್ತಿ ಆತಂಕ ವ್ಯಕ್ತಪಡಿಸಿದರು.
ದಲಿತ ಸಂಘಷ ಸಮಿತಿ (ಅಂಬೇಡ್ಕರ್ ವಾದ) ಮಾವಳ್ಳಿ ಶಂಕರ್ ಮಾತನಾಡಿ, ‘ನಾಗಮೋಹನ್ ದಾಸ್ ಆಯೋಗ ನೀಡಿರುವ ಪ್ರವರ್ಗ ‘ಎ’, ‘ಬಿ’ ಹಾಗೆಯೇ ಉಳಿಸಿಕೊಳ್ಳಬೇಕು. ‘ಇ’ ಅಲ್ಲಿರುವ ಎಕೆ- ಎಡಿ ಅನ್ನು ‘ಸಿ’ ಗೆ ವರ್ಗಾವಣೆ ಮಾಡಿದರೆ ಅಸಮಾಧಾನ ಶಮನ ಆಗುತ್ತದೆ’ ಎಂದು ಸಲಹೆ ನೀಡಿದರು.
ಶಿಕ್ಷಣ ತಜ್ಞ ಬಿ.ಶ್ರೀಪಾದ ಭಟ್, ಪತ್ರಕರ್ತರಾದ ಹರ್ಷಕುಮಾರ್ ಕುಗ್ವೆ, ಎಚ್.ವಿ. ವಾಸು, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಪ್ರಾಧ್ಯಾಪಕ ಎಸ್. ಗೋವಿಂದಯ್ಯ ಸೇರಿದಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.