ಮಂಗಳೂರು: ರಾಜಸ್ತಾನದ ಉದಯಪುರದಲ್ಲಿ ನಡೆದ ಹಿಂದೂ ಟೈಲರ್ ಹತ್ಯೆ ಪ್ರಕರಣ ನಾಚಿಕೆಗೇಡು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಂಡಿಸಿದರು.
‘ಮಾನವೀಯತೆಗೆ ಸವಾಲಾಗಿರುವ ಪ್ರಕರಣವಿದು. ನಿರಂತರ ಗಲಭೆ ಸೃಷ್ಟಿಸಲು ಹತ್ಯೆ ಮಾಡಿ ಸಮಾಜ ಒಡೆಯುವ ಹುನ್ನಾರ ನಡೆದಿದೆ. ಜಿಹಾದ್ ಹೆಸರಿನಲ್ಲಿ ಇದನ್ನು ನಡೆಸಲಾಗುತ್ತಿದೆ. ಜನರ ನಡುವಿನ ವಿಶ್ವಾಸ ಕಡಿಮೆಗೊಳಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಳೆದಂತೆಯೇ ಕಠಿಣ ನಿಲುವುಗಳನ್ನು ತಳೆಯಬೇಕಾದ ಅವಶ್ಯಕತೆ ಇದೆ’ ಎಂದು ಅವರು ಪ್ರತಿಪಾದಿಸಿದರು.
ಇಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಉದಯಪುರದ ಘಟನೆ ಒಂದು ವ್ಯವಸ್ಥಿತ ಸಂಚು. ಭಯೋತ್ಪಾದನಾ ಚಟುವಟಿಕೆ ಮತ್ತೆ ಶುರುವಾಗಿರುವ ಸೂಚನೆ. ನೂಪುರ್ ಶರ್ಮ ಹೇಳಿಕೆ ನಂತರ ನಡೆದ ಗಲಭೆಗಳು ಹಾಗೂಉದಯಪುರದ ಘಟನೆ ಹಿಂದೆ ವಿದೇಶಿಯರ ಹಾಗೂ ಭಯೋತ್ಪಾದಕರ ಕೈವಾಡ ಇದೆ’ಎಂದುಅವರುಆರೋಪಿಸಿದರು.
‘ಉದಯಪುರ ಮಾದರಿಯ ಘಟನೆ ಶಿವಮೊಗ್ಗದಲ್ಲೂ ನಡೆದಿತ್ತು. ಹಿಂದೂ ಕಾರ್ಯಕರ್ತ ಹರ್ಷನ ಕತ್ತು ಸಿಗಿದು ವಿಡಿಯೊ ಮಾಡಿದ ದುಷ್ಕರ್ಮಿಗಳು ಅದನ್ನು ಅವನ ತಂಗಿಗೆ ಕಳುಹಿಸಿಕೊಟ್ಟಿದ್ದರು. ರಾಜ್ಯ ಸರ್ಕಾರ ತಕ್ಷಣ ಕಠಿನ ಕ್ರಮ ಕೈಗೊಳ್ಳುವ ಮೂಲಕ ಎಲ್ಲ ಹಂತಕರನ್ನು ಬಂಧಿಸಿದೆ. ರಾಜಸ್ಥಾನದಲ್ಲಿ ಇಂತಹ ಘಟನೆಗಳು ಪುನಾರಾವರ್ತನೆ ಆಗುವುದಕ್ಕೆ ಅಲ್ಲಿನ ಸರ್ಕಾರ ತುಷ್ಟೀಕರಣದ ರಾಜನೀತಿಯನ್ನು ಅನುಸರಿಸುತ್ತಿರುವುದು ಕೂಡ ಕಾರಣ’ ಎಂದರು.
‘ಉದಯಪುರ ಘಟನೆ ಬಗ್ಗೆ ಕಾಂಗ್ರೆಸ್ ನಾಯಕರು ಮೌನವಾಗಿರುವುದು ಏಕೆ. ಇಂತಹ ದುಷ್ಕೃತ್ಯ ನಡೆದಾಗ ಅವರು ಯಾರ ಪರವಾಗಿರುತ್ತಾರೆ ಎಂಬುದು ಇದರಿಂದ ಸ್ಪಷ್ಟ. ಹಿಂದೂ ಸಮಾಜದವರ ಮೇಲೆ ದಾಳಿ ಆದಾಗ ಮೌನವಹಿಸುವ ಆ ರಾಜಕೀಯ ಪಕ್ಷ, ಅಲ್ಪಸಂಖ್ಯಾತರ ಮೇಲೆ ದಾಳಿ ಆದಾಗ ಎದ್ದು ನಿಲ್ಲುತ್ತದೆ’ ಎಂದರು.
‘ದೇಶದಲ್ಲಿ ಅತಂತ್ರ ಸ್ಥಿತಿ ತರುವ ಹಾಗೂ ಜಿಹಾದಿ ಮಾನಸಿಕತೆ ಬೆಳೆಸುವ ಪ್ರಯತ್ನಗಳು ನಡೆಯುತ್ತಿವೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇವುಗಳನ್ನೆಲ್ಲ ಸಹಿಸುವುದಿಲ್ಲ. ಇದಕ್ಕೆಲ್ಲ ತಡೆ ಒಡ್ಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಈ ರೀತಿಯ ಘಟನೆಗಳನ್ನು ಅಲ್ಲಲ್ಲೇ ನಿಯಂತ್ರಿಸುವ ಕೆಲಸ ಆಗಬೇಕು. ಕ್ರೂರಿ ಮಾನಸಿಕತೆಗಳಿಗೆ ಭಯದ ವಾತಾವರಣ ಸೃಷ್ಟಿಸಬೇಕು. ಅಂಥಹ ವಾತಾವರಣವನ್ನ ನಮ್ಮ ಸರ್ಕಾರವೂ ನಿರ್ಮಿಸಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.