ADVERTISEMENT

ಸಿಎಂ ಸ್ಥಾನಕ್ಕೆ ₹2,500 ಕೋಟಿ ಹೇಳಿಕೆಗೆ ಯತ್ನಾಳಗೆ ನೋಟಿಸ್‌: ಕಟೀಲ್

​ಪ್ರಜಾವಾಣಿ ವಾರ್ತೆ
Published 7 ಮೇ 2022, 18:56 IST
Last Updated 7 ಮೇ 2022, 18:56 IST
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್   

ಬೆಂಗಳೂರು: ‘ಮುಖ್ಯಮಂತ್ರಿ ಸ್ಥಾನ ನೀಡಲು ₹2,500 ಕೋಟಿ ಹಣ ಕೇಳಿದ್ದಾಗಿ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ನೋಟಿಸ್ ನೀಡಿ ವಿವರಣೆ ಪಡೆಯಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ತುಮಕೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯತ್ನಾಳ ಹೇಳಿರುವ ಎಲ್ಲಾ ವಿಚಾರಗಳನ್ನು ಪಕ್ಷದ ಕೇಂದ್ರ ಶಿಸ್ತು ಸಮಿತಿಯ ಗಮನಕ್ಕೆ ತರಲಾಗಿದ್ದು, ವರಿಷ್ಠರಿಗೆ ಎಲ್ಲಾ ಮಾಹಿತಿ ನೀಡಲಾಗಿದೆ. ಅವರಿಂದ ಪರಿಪೂರ್ಣ ವಿವರಣೆ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಅನಗತ್ಯ ಹೇಳಿಕೆ ನೀಡಿದ ಯತ್ನಾಳ ಅವರಿಗೆ ಈವರೆಗೆ ಎರಡು ಬಾರಿ ನೋಟಿಸ್ ಕೊಟ್ಟು, ವಿವರಣೆ ಪಡೆದುಕೊಳ್ಳಲಾಗಿದೆ. ಈ ಬಾರಿಯೂ ಶಿಸ್ತು ಸಮಿತಿ ಮೂಲಕ ನೋಟಿಸ್ ನೀಡಲಾಗುವುದು. ಉತ್ತರ ಬಂದ ನಂತರ ಕ್ರಮ ಜರುಗಿಸಲಾಗುತ್ತದೆ. ಬಿಜೆಪಿಯಲ್ಲಿ ದೊಡ್ಡವರು, ಸಣ್ಣವರು ಎನ್ನುವ ಪ್ರಶ್ನೆ ಇಲ್ಲ. ಎಲ್ಲರೂ ಶಿಸ್ತು ಸಮಿತಿಯ ವ್ಯಾಪ್ತಿಗೆ ಒಳಪಡುತ್ತಾರೆ’ ಎಂದರು.

ADVERTISEMENT

‘ಹೈಕಮಾಂಡ್ ಹಣ ಕೇಳಿದೆ ಅಂದಿಲ್ಲ’ (ವಿಜಯಪುರ ವರದಿ): ‘ಕಾಲ್ ಮಾಡಿ ಸೋನಿಯಾ ಗಾಂಧಿ ಭೇಟಿ ಮಾಡಿಸುತ್ತೇನೆ ಎಂದಿದ್ದಾರೆ. ಇಂಥ ದಲಾಲರು ರಾಜ್ಯದಲ್ಲಿದ್ದಾರೆ. ನಿಮ್ಮ ಸಿ.ಎಂ ಸೀಟ್‌ಗಾಗಿ ನಾವು ಟ್ರೈ ಮಾಡ್ತೀವಿ ಎಂದು ಹೇಳುತ್ತಾರೆ. ಇಷ್ಟು ಸಾವಿರ ಕೋಟಿ ರೆಡಿ ಇಡಿ ಎನ್ನುತ್ತಾರೆ. ಇಂಥವರಿಗೆ ಛೀಮಾರಿ ಹಾಕಿದ್ದೇನೆ ಎಂದು ರಾಮದುರ್ಗದಲ್ಲಿ ಹೇಳಿದ್ದೇನೆಯೇ ಹೊರತು, ಹೈಕಮಾಂಡ್ ಹಣ ಕೇಳಿದೆ ಎಂದು ಹೇಳಿಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೆಹಲಿ ಸಾಧು ಒಬ್ಬ ತಾನು ಕೇದಾರ ಮಹಾರಾಜ ಮಾತಾಡೋದು, ನನಗೆ ಎಲ್ಲರೂ ಗೊತ್ತು. ಇಷ್ಟು ಹಣ ತಂದು ಕೊಟ್ಟರೆ ಶಿಫಾರಸು ಮಾಡುತ್ತೇನೆ ಅಂತಾರೆ. ಇದೆಲ್ಲ ರೆಕಾರ್ಡ್ ಇಟ್ಟುಕೊಳ್ಳಲು ಅಗಲ್ಲ. ಹೀಗೆ ರಾಜಕಾರಣ ನಡೆಯುತ್ತದೆ. ರಾಮದುರ್ಗದಲ್ಲಿ ವೇದಿಕೆ ಮೇಲೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ಕೆಲ ಟಿಕೆಟ್ ಆಕಾಂಕ್ಷಿಗಳಿದ್ದರು. ಅವರಿಗೆ ಹಿತವಚನ ಹೇಳಲು ಆ ರೀತಿ ಮಾತನಾಡಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.