ADVERTISEMENT

ನಳಿನ್‌ಕುಮಾರ್‌ ಕಟೀಲ್‌ ಒಬ್ಬ ಅವಿವೇಕಿ: ಕೆಪಿಸಿಸಿ ವಕ್ತಾರ ಲಕ್ಷ್ಮಣ ಕಿಡಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 7:43 IST
Last Updated 20 ಅಕ್ಟೋಬರ್ 2021, 7:43 IST
ಕಾಂಗ್ರೆಸ್‌ ನಗರ ಘಟಕದ ವತಿಯಿಂದ ಇಲ್ಲಿನ ಕಾಂಗ್ರೆಸ್‌ ಭವನದ ಮುಂಭಾಗ ನಳಿನ್‌ಕುಮಾರ್‌ ಕಟೀಲ್‌ ಅವರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.
ಕಾಂಗ್ರೆಸ್‌ ನಗರ ಘಟಕದ ವತಿಯಿಂದ ಇಲ್ಲಿನ ಕಾಂಗ್ರೆಸ್‌ ಭವನದ ಮುಂಭಾಗ ನಳಿನ್‌ಕುಮಾರ್‌ ಕಟೀಲ್‌ ಅವರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.   

ಮೈಸೂರು: ‘ರಾಹುಲ್‌ ಗಾಂಧಿ ವಿರುದ್ಧ ಕೀಳುಮಟ್ಟದ ಮಾತುಗಳನ್ನಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಒಬ್ಬ ಅಯೋಗ್ಯ, ಅವಿವೇಕಿ, ಹುಚ್ಚರ ಬ್ರಾಂಡ್‌ ಅಂಬಾಸಿಡರ್‌’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಕಿಡಿಕಾರಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬಿಜೆಪಿ ಮುಖಂಡರು ವಿಷಯಾಧಾರಿತ ಚರ್ಚೆ ಬಿಟ್ಟು ವೈಯಕ್ತಿಕ ಟೀಕೆ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಸಭ್ಯ ರಾಜಕಾರಣಕ್ಕೆ ತಿಲಾಂಜಲಿಯನ್ನಿಟ್ಟಿದ್ದಾರೆ. ಕಟೀಲ್‌ ಹಿನ್ನೆಲೆ ಏನು ಎಂಬುದು ಇಡೀ ರಾಜ್ಯದ ಜನರಿಗೆ ಗೊತ್ತು. ಊಹೆಯ ಆಧಾರದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳು ಅರೋಪ ಮಾಡಬೇಡಿ. ನಾಲಗೆ ಬಿಗಿಹಿಡಿದು ಮಾತನಾಡಿ’ ಎಂದು ಎಚ್ಚರಿಸಿದರು.

‘ಸೋನಿಯಾ ಗಾಂಧಿ ಮತ್ತು ಡಿ.ಕೆ.ಶಿವಕುಮಾರ್‌ ಜಾಮೀನಿನಲ್ಲಿ ಹೊರಗಿದ್ದಾರೆ ಎಂದು ಹೇಳಿದ್ದೀರಿ. ಗೃಹ ಸಚಿವ ಅಮಿತ್‌ ಶಾ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜೈಲಿನಲ್ಲಿರಲಿಲ್ವಾ?’ ಎಂದು ತಿರುಗೇಟು ನೀಡಿದರು.

ADVERTISEMENT

‘ನಿಮಗೆ ತಾಕತ್ತಿದ್ದರೆ ಅಭಿವೃದ್ದಿ ವಿಚಾರದ ಕುರಿತು ಚರ್ಚೆಗೆ ಬನ್ನಿ. ಕಾಂಗ್ರೆಸ್‌ನ ವೈಫಲ್ಯವಿದ್ದರೆ ಆ ಬಗ್ಗೆ ಟೀಕಿಸಿ. ನಮ್ಮ ಅಭ್ಯಂತರವಿಲ್ಲ. ಆದರೆ ಇದೇ ರೀತಿ ವೈಯಕ್ತಿಕ ನಿಂದನೆ ಮಾಡಿದರೆ, ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು’ ಎಂದು ಹರಿಹಾಯ್ದರು.

‘ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು, ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕಿಂತಲೂ ಹಿಂದೆ ಬಿದ್ದಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಶತಕದ ಗಡಿ ದಾಟಿದೆ. ಇಂತಹ ವಿಚಾರಗಳ ಬಗ್ಗೆ ಮಾತನಾಡಿ. ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ’ ಎಂದರು.

ಭಾವಚಿತ್ರ ಸುಟ್ಟು ಪ್ರತಿಭಟನೆ: ಕಾಂಗ್ರೆಸ್‌ ನಗರ ಘಟಕದ ವತಿಯಿಂದ ಇಲ್ಲಿನ ಕಾಂಗ್ರೆಸ್‌ ಭವನದ ಮುಂಭಾಗ ನಳಿನ್‌ಕುಮಾರ್‌ ಕಟೀಲ್‌ ಅವರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.