ADVERTISEMENT

ಶಬರಿಮಲೆ ಜಲಿಯನ್‌ ವಾಲಾಬಾಗ್‌ ಆಗುತ್ತಿದೆ: ಸಂಸದ ಕಟೀಲ್‌ ಆರೋಪ

ಸಂಸದ ನಳಿನ್‌ಕುಮಾರ್‌ ಕಟೀಲ್‌ ಆರೋಪ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 13:08 IST
Last Updated 21 ನವೆಂಬರ್ 2018, 13:08 IST
   

ಮಂಗಳೂರು: ‘ಶಬರಿಮಲೆಯನ್ನು ಮತ್ತೊಂದು ಜಲಿಯನ್‌ ವಾಲಾಬಾಗ್‌ ಮಾಡಲು ಪಿಣರಾಯಿ ವಿಜಯನ್‌ ನೇತೃತ್ವದ ಕೇರಳದ ಎಡಪಕ್ಷಗಳ ಸರ್ಕಾರ ಪ್ರಯತ್ನಿಸುತ್ತಿದೆ’ ಎಂದು ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್‌ ಕಟೀಲ್‌ ಆರೋಪಿಸಿದರು.

‘ಶಬರಿಮಲೆಯನ್ನು ಮತ್ತೊಂದು ಅಯೋಧ್ಯೆ ಮಾಡಲು ಬಿಡುವುದಿಲ್ಲ’ ಎಂಬ ಪಿಣರಾಯಿ ವಿಜಯನ್‌ ಹೇಳಿಕೆಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ‘ಎಡಪಂಥೀಯ ಸರ್ಕಾರ ಹಿಂದೂಗಳ ಧಾರ್ಮಿಕ ಹಕ್ಕನ್ನು ಮೊಟಕುಗೊಳಿಸುತ್ತಿದೆ. ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರಿಗೆ ಚಿತ್ರಹಿಂಸೆ ನೀಡುತ್ತಿದೆ. ಶಬರಿಮಲೆಯನ್ನು ಮತ್ತೊಂದು ಜಲಿಯನ್‌ ವಾಲಾಬಾಗ್‌ ಮಾಡುವ ಯತ್ನ ಎಡಪಕ್ಷಗಳ ಸರ್ಕಾರದಿಂದ ಆಗುತ್ತಿದೆ’ ಎಂದು ಟೀಕಿಸಿದರು.

ಭಕ್ತರು ಬೆಟ್ಟದ ಮೇಲೆ ಆರು ಗಂಣಟೆಗಳ ಕಾಲ ಮಾತ್ರ ಇರಬೇಕೆಂಬ ನಿರ್ಬಂಧ ವಿಧಿಸಲಾಗಿದೆ. ದೇವಾಲಯದ ಆವರಣದಲ್ಲಿ ಘೋಷಣೆ ಕೂಗಿದರೆ ಬಂಧಿಸಲಾಗುತ್ತಿದೆ. ನಾಲ್ಕು ಜನರಿಗಿಂತ ಹೆಚ್ಚು ಮಂದಿ ಗುಂಪುಗೂಡಿದರೂ ಬಂಧಿಸುತ್ತಿದ್ದಾರೆ. 10,000ಕ್ಕೂ ಹೆಚ್ಚುಮಂದಿ ಪೊಲೀಸರನ್ನು ತುಂಬಿಸಲಾಗಿದೆ. ಇದರಿಂದ ಭಕ್ತರಲ್ಲಿ ಭಯ ಹುಟ್ಟಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

‘ನಾನು ಮತ್ತು ರಾಜ್ಯಸಭಾ ಸದಸ್ಯ ವಿ.ಮುರಳೀಧರನ್‌ ಮಂಗಳವಾರ ಶಬರಿಮಲೆಗೆ ಭೇಟಿನೀಡಿ ಮಾಹಿತಿ ಸಂಗ್ರಹಿಸಿದ್ದೇವೆ. ಭಕ್ತರಿಗೆ ತೊಂದರೆ ನೀಡದಂತೆ ತಿರುವಾಂಕೂರು ದೇವಸ್ವಂ ಮಂಡಳಿ ಜೊತೆ ಮಾತುಕತೆ ನಡೆಸಿದ್ದೇವೆ. ಆದರೆ, ಮಂಡಳಿಯು ಅಲ್ಲಿನ ಸರ್ಕಾರದ ಭಾಗವಾಗಿದ್ದು, ಎಡಪಕ್ಷಗಳ ಆಣತಿಯಂತೆ ನಡೆದುಕೊಳ್ಳುತ್ತಿದೆ’ ಎಂದರು.

ಮೂಲಸೌಕರ್ಯ ಕೊರತೆ:

ವರ್ಷಕ್ಕೆ ಆರು ಕೋಟಿ ಭಕ್ತರು ಭೇಟಿನೀಡುವ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅಲ್ಲಿನ ಸರ್ಕಾರ ಕ್ರಮ ಕೈಗೊಂಡಿಲ್ಲ. ನಿಲಕ್ಕಲ್‌ನಲ್ಲಿ ವಾಹನ ನಿಲುಗಡೆಗೆ ಸರಿಯಾದ ವ್ಯವಸ್ಥೆ ಮಾಡಿಲ್ಲ. ಭಕ್ತರ ವಾಸ್ತವ್ಯ, ಸ್ನಾನ ಮತ್ತು ಶೌಚಕ್ಕೆ ಸರಿಯಾದ ವ್ಯವಸ್ಥೆ ಇಲ್ಲ. ಪೊಲೀಸರು ಹಾಗೂ ದೇವಾಲಯದ ಸಿಬ್ಬಂದಿಗೂ ಸೂಕ್ತ ವ್ಯವಸ್ಥೆಗಳಿಲ್ಲ ಎಂದು ದೂರಿದರು.

‘ಪ್ರವಾಹದಿಂದ ಉಂಟಾಗಿರುವ ಹಾನಿಯನ್ನು ಸರಿಪಡಿಸಲು ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಶಬರಿಮಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ₹ 100 ಕೋಟಿ ಒದಗಿಸಿತ್ತು. ಬಿಡುಗಡೆಯಾಗಿರುವ ₹ 18 ಕೋಟಿಗೆ ಬಳಕೆ ಪ್ರಮಾಣಪತ್ರವನ್ನು ಇನ್ನೂ ಸಲ್ಲಿಸಿಲ್ಲ’ ಎಂದರು.

ಮೂಲಸೌಕರ್ಯ ಅಭಿವೃದ್ಧಿ ವಿಚಾರದಲ್ಲಿ ತನ್ನ ವೈಫಲ್ಯ ಮುಚ್ಚಿಡಲು ಕೇರಳ ಸರ್ಕಾರ, ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ. ಪಿಣರಾಯಿ ವಿಜಯನ್‌ ಅಧಿಕಾರದಿಂದ ಇಳಿಯುವ ದಿನಗಳು ಸಮೀಪಿಸುತ್ತಿವೆ. ಡಿಸೆಂಬರ್‌ 11ರಿಂದ ಆರಂಭವಾಗುವ ಸಂಸತ್‌ ಅಧಿವೇಶನದಲ್ಲಿ ಎಲ್ಲ ವಿಚಾರಗಳನ್ನೂ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.