ADVERTISEMENT

ಹೆಸರಿಗಷ್ಟೇ ಸಂಶೋಧನಾ ವಿಶ್ವವಿದ್ಯಾಲಯ!

ನಿಗದಿತ ಕಾಲಮಿತಿಯೊಳಗೆ ಮುಗಿಯದ ಯೋಜನೆ; ಒಂದೂ ಪುಸ್ತಕ ಬರೆಯದ ಪ್ರಾಧ್ಯಾಪಕರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಜೂನ್ 2019, 19:42 IST
Last Updated 26 ಜೂನ್ 2019, 19:42 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ಲೋಗೋ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಲೋಗೋ   

ಹೊಸಪೇಟೆ: ಸಂಶೋಧನೆಗಾಗಿಯೇ ಮೀಸಲಾಗಿರುವ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಿಗದಿತ ಅವಧಿಯೊಳಗೆ ಸಂಶೋಧನಾ ಕೆಲಸಗಳು ನಡೆಯುತ್ತಿಲ್ಲ. ಹೆಸರಿಗಷ್ಟೇ ಸಂಶೋಧನೆಯ ವಿ.ವಿ. ಆಗಿದೆಯೇ ಎಂಬ ಅನುಮಾನ ಮೂಡಿದೆ.

ಬೆರಳೆಣಿಕೆಯಷ್ಟು ಪ್ರಾಧ್ಯಾಪಕರನ್ನು ಹೊರತುಪಡಿಸಿದರೆ ಬಹುತೇಕರು ನಿಗದಿತ ಕಾಲಮಿತಿಯೊಳಗೆ ಸಂಶೋಧನೆಗೆ ಸಂಬಂಧಿಸಿದ ಯೋಜನೆ ಸಲ್ಲಿಕೆ ಮಾಡುತ್ತಿಲ್ಲ. ನಿಯಮದ ಪ್ರಕಾರ, ಪ್ರತಿ ವರ್ಷ ವಿ.ವಿ.ಯ ಒಬ್ಬ ಪ್ರಾಧ್ಯಾಪಕ ವೈಯಕ್ತಿಕವಾಗಿ ಒಂದು ಮತ್ತು ಆಯಾ ವಿಭಾಗದಿಂದ ಸಾಂಸ್ಥಿಕವಾಗಿ ಒಂದು ಸಂಶೋಧನಾ ಯೋಜನೆ ಪೂರ್ಣಗೊಳಿಸಿ, ಪುಸ್ತಕ ಹೊರತರಬೇಕು. ಆದರೆ, ಆ ಕೆಲಸ ಆಗುತ್ತಿಲ್ಲ.

ವಿ.ವಿ. ಸ್ಥಾಪನೆಗೊಂಡು 25 ವರ್ಷಗಳಾಗಿವೆ. ಸದ್ಯ ವಿ.ವಿ.ಯಲ್ಲಿ 68 ಜನ ಪ್ರಾಧ್ಯಾಪಕರಿದ್ದಾರೆ. ಬಹುತೇಕರು ವಿ.ವಿ. ಆರಂಭದ ಸಂದರ್ಭದಲ್ಲಿಯೇ ಕೆಲಸಕ್ಕೆ ಸೇರಿದ್ದಾರೆ.ಪ್ರಾಧ್ಯಾಪಕರಾದ ಅಮರೇಶ ನುಗಡೋಣಿ, ರಹಮತ್‌ ತರೀಕೆರೆ, ಕೆ. ರವೀಂದ್ರನಾಥ, ವೀರೇಶ ಬಡಿಗೇರ್‌, ಎಫ್‌.ಟಿ. ಹಳ್ಳಿಕೇರಿ, ಇತ್ತೀಚೆಗೆ ಕೆಲಸದಿಂದ ನಿವೃತ್ತರಾದ ಚಂದ್ರ ಪೂಜಾರಿ ಸೇರಿದಂತೆ ಕೆಲವರು ಕಾಲಕಾಲಕ್ಕೆ ಸಂಶೋಧನೆ ಪೂರ್ಣಗೊಳಿಸಿ, ಯೋಜನೆ ಸಲ್ಲಿಸಿದ್ದಾರೆ.

ADVERTISEMENT

ಆದರೆ, ಹೆಚ್ಚಿನವರು ಯೋಜನೆಯನ್ನು ಕಾಲಮಿತಿಯಲ್ಲಿ ಮುಗಿಸಿಲ್ಲ. ಕೆಲ ಪ್ರಾಧ್ಯಾಪಕರಂತೂ 25 ವರ್ಷಗಳಲ್ಲಿ ಒಂದು, ಎರಡು ಪುಸ್ತಕಗಳಷ್ಟೇ ಬರೆದು ಸಲ್ಲಿಕೆ ಮಾಡಿದ್ದಾರೆ. ಮತ್ತೆ ಕೆಲವರು ಸಂಪಾದನೆ ಕೆಲಸಕ್ಕಷ್ಟೇ ಸೀಮಿತವಾಗಿದ್ದಾರೆ. ಕೆಲವರಂತೂ ವರ್ಷದಲ್ಲಿ ಮುಗಿಸಬೇಕಾದ ಯೋಜನೆ, ನಾಲ್ಕೈದು ವರ್ಷಗಳಾದರೂ ಪೂರ್ಣಗೊಳಿಸಿಲ್ಲ. ಯೋಜನೆ ಪ್ರಗತಿಯಲ್ಲಿದೆ ಎಂದು ಟಿಪ್ಪಣಿ ಬರೆದುಕೊಟ್ಟು ಜಾರಿಕೊಳ್ಳುತ್ತಿದ್ದಾರೆ. ಅಂತಹವರ ವಿರುದ್ಧ ಯಾವುದೇ ಕ್ರಮವೂ ಜರುಗಿಸಿಲ್ಲ.

ವೇತನ ಸಹಿತವಾಗಿವೈಯಕ್ತಿಕ ಯೋಜನೆಗೆ ಒಬ್ಬ ಪ್ರಾಧ್ಯಾಪಕನಿಗೆ ವರ್ಷಕ್ಕೆ ₹25ರಿಂದ ₹30 ಸಾವಿರ, ಇನ್ನು ಸಾಂಸ್ಥಿಕ ಯೋಜನೆಗೆ ₹50 ಸಾವಿರ ಹಣ ಕೊಡಲಾಗುತ್ತದೆ. ಕ್ಷೇತ್ರ ಅಧ್ಯಯನ, ಪ್ರವಾಸ ಭತ್ಯೆಯನ್ನು ಇದು ಒಳಗೊಂಡಿರುತ್ತದೆ. ಮೇಲಿಂದ ಪ್ರತ್ಯೇಕ ರಜೆ ಕೂಡ ಕೊಡಲಾಗುತ್ತದೆ.

ಇಷ್ಟೆಲ್ಲ ಸೌಲಭ್ಯ ಕಲ್ಪಿಸಿದರೂ ಯೋಜನೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಅದಕ್ಕೆ ಉತ್ತರದಾಯಿತ್ವದ ಕೊರೆತೆಯೇ ಪ್ರಮುಖ ಕಾರಣ ಎನ್ನುತ್ತಾರೆ ವಿ.ವಿ. ಹಿರಿಯ ಪ್ರಾಧ್ಯಾಪಕರು.

‘ಯಾರು ಕಾಲಮಿತಿಯಲ್ಲಿ ಒಪ್ಪಿಕೊಂಡ ಯೋಜನೆ ಮುಗಿಸುತ್ತಿಲ್ಲ ಅಂತಹವರನ್ನು ಹೊಣೆಗಾರರಾಗಿ ಮಾಡಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೆಲಸ ಮಾಡಿದವರಿಗೂ ಸಂಬಳ, ಮಾಡದವರಿಗೂ ವೇತನ ಕೊಡಲಾಗುತ್ತದೆ. ಇದರಲ್ಲಿ ಪ್ರಾಧ್ಯಾಪಕರ ಜತೆಗೆ ಕುಲಪತಿಯಾದವರ ತಪ್ಪು ಕೂಡ ಇದೆ. ಕೆಲಸ ಮಾಡದವರಿಂದ ಸೂಕ್ತ ಕಾರಣ ಕೇಳಿ ಕ್ರಮ ಜರುಗಿಸಬೇಕು. ಆ ಕೆಲಸವೇ ಆಗುತ್ತಿಲ್ಲ. ಹಿಂದೆ ಎಂ.ಎಂ. ಕಲಬುರ್ಗಿ ಅವರು ಕುಲಪತಿಯಾಗಿದ್ದ ಅವಧಿಯಲ್ಲಿ ಎಲ್ಲ ಯೋಜನೆಗಳನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿದ್ದರು. ಕೆಲಸ ಮಾಡದವರಿಗೆ ಬಿಸಿ ಮುಟ್ಟಿಸಿ ಮಾಡಿಸುತ್ತಿದ್ದರು‘ ಎಂದು ನಿವೃತ್ತ ಪ್ರಾಧ್ಯಾಪಕ ಚಂದ್ರ ಪೂಜಾರಿ ಹೇಳಿದರು.

‘ಕನ್ನಡ ವಿ.ವಿ.ಯೊಂದೆ ಅಲ್ಲ ಬಹುತೇಕ ಸರ್ಕಾರಿ ಸಂಸ್ಥೆಗಳಲ್ಲಿ ಉತ್ತರದಾಯಿತ್ವದ ಕೊರತೆ ಇದೆ. ಖಾಸಗಿ ವಲಯದಲ್ಲಿ ನೌಕರನ ಕೆಲಸ, ಕ್ರಿಯಾಶೀಲತೆ ನೋಡಿ ಸಂಬಳ ಪರಿಷ್ಕರಿಸಲಾಗುತ್ತದೆ. ಆ ವ್ಯವಸ್ಥೆ ಇಲ್ಲೂ ಬರಬೇಕು. ಅಂತಿಮವಾಗಿ ತೆರಿಗೆದಾರರ ಹಣದಲ್ಲಿ ನಮ್ಮ ಜೀವನ ನಡೆಯುತ್ತಿದೆ. ಅದಕ್ಕೆ ಬದ್ಧತೆ ತೋರಿಸಬೇಕು ಎಂಬುದು ಪ್ರಾಧ್ಯಾಪಕರಲ್ಲಿಯೂ ಬರಬೇಕು’ ಎಂದರು.

‘ಎಷ್ಟೇ ತಾಕೀತು ಮಾಡಿದರೂ ವಿ.ವಿ. ಪ್ರಾಧ್ಯಾಪಕರು ಪುಸ್ತಕ ಬರೆದು ಕೊಡದ ಕಾರಣ ಹಿಂದೆ ಕುಲಪತಿಗಳಾಗಿದ್ದ ಮುರಿಗೆಪ್ಪ, ಬಿ.ಎ. ವಿವೇಕ ರೈ ಅವರು ಹೊರಗಿನ ಸಂಪನ್ಮೂಲ ವ್ಯಕ್ತಿಗಳಿಂದ ಆ ಕೆಲಸ ಮಾಡಿಸಿದರು. ನಂತರ ಬಂದ ಕುಲಪತಿಗಳು ಅದರ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಲಿಲ್ಲ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ವಿ.ವಿ. ಹಿರಿಯ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

‘ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ವಹಿಸಿಕೊಂಡ ಯೋಜನೆ ಕುರಿತು ಕ್ಷೇತ್ರ ಅಧ್ಯಯನ ಮಾಡಿ ಪುಸ್ತಕ ಬರೆಯುವುದು ಬಿಟ್ಟರೆ ವಿ.ವಿ. ಪ್ರಾಧ್ಯಾಪಕರಿಗೆ ಬೇರೆ ಕೆಲಸವೇ ಇಲ್ಲ. ಹೀಗಿದ್ದರೂ ಪ್ರಾಧ್ಯಾಪಕರು ಕೆಲಸ ಮಾಡುತ್ತಿಲ್ಲ. ಯಾವ ಉದ್ದೇಶಕ್ಕಾಗಿ ವಿ.ವಿ. ಕಟ್ಟಲಾಗಿತ್ತೋ ಆ ಆಶಯಕ್ಕೆ ವಿರುದ್ಧವಾಗಿ ನಡೆಯುತ್ತಿರುವುದು ದುರದೃಷ್ಟಕರ’ ಎಂದರು.

‘ಅಶಿಸ್ತು ಸಹಿಸುವುದಿಲ್ಲ’

‘ನಿಗದಿತ ಕಾಲಮಿತಿಯಲ್ಲಿ ಯೋಜನೆಗಳನ್ನು ಏಕೆ ಸಲ್ಲಿಸಿಲ್ಲ ಎನ್ನುವುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಅದಾದ ಬಳಿಕ ಪ್ರಾಧ್ಯಾಪಕರೊಂದಿಗೆ ಸಭೆ ನಡೆಸುತ್ತೇನೆ. ಯಾರಿಗೆ ಯಾವ ಕೆಲಸ ಒಪ್ಪಿಸಲಾಗಿದೆಯೋ ಅದನ್ನು ಅವರು ಪೂರ್ಣಗೊಳಿಸಿಯೇ ಕೊಡಬೇಕು. ಏನೋ ಕಾರಣ ನೀಡಿ ತಪ್ಪಿಸಿಕೊಳ್ಳುವಂತಿಲ್ಲ. ಅಶಿಸ್ತು ಸಹಿಸುವುದಿಲ್ಲ’ ಎಂದು ಕುಲಪತಿ ಪ್ರೊ. ಸ.ಚಿ. ರಮೇಶ ತಿಳಿಸಿದರು.

‘ಬರವಣಿಗೆಯೇ ಇಲ್ಲ’

‌‘ಬೆರಳೆಣಿಕೆಯಷ್ಟು ಪ್ರಾಧ್ಯಾಪಕರನ್ನು ಹೊರತುಪಡಿಸಿದರೆ ಬಹುತೇಕರಲ್ಲಿ ಬರವಣಿಗೆಯೇ ಇಲ್ಲ. ಪ್ರಭಾವ ಬಳಸಿಕೊಂಡು ಕೆಲಸಕ್ಕೆ ಸೇರಿದ್ದಾರೆ. ನನ್ನ ಅವಧಿಯಲ್ಲಿ ಬೆನ್ನು ಬಿದ್ದು ಯೋಜನೆ ಮುಗಿಸಿ ಕೊಡುವಂತೆ ಕೇಳಿದರೂ ಬಹುತೇಕರು ಕಿವಿಗೆ ಹಾಕಿಕೊಳ್ಳಲಿಲ್ಲ. ಹೀಗಾಗಿ ಕೆಲವು ಯೋಜನೆಗಳನ್ನು ಹೊರಗಿನವರಿಂದ ಪೂರ್ಣಗೊಳಿಸಿದೆ. ಅಂದುಕೊಂಡಷ್ಟು ಪುಸ್ತಕಗಳನ್ನು ಹೊರತರಲು ಸಾಧ್ಯವಾಗಲೇ ಇಲ್ಲ’ ಎಂದು ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಎಸ್‌.ಘಂಟಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.