ADVERTISEMENT

ನಾಲಾ ಆಧುನೀಕರಣ: ಸಿ.ಎಂ ಬೊಮ್ಮಾಯಿ–ಎಂ.ಬಿ.ಪಾಟೀಲ ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 23:10 IST
Last Updated 18 ಜನವರಿ 2023, 23:10 IST
ಬಸವರಾಜ ಬೊಮ್ಮಾಯಿ, ಎಂ.ಬಿ.ಪಾಟೀಲ
ಬಸವರಾಜ ಬೊಮ್ಮಾಯಿ, ಎಂ.ಬಿ.ಪಾಟೀಲ   

ಬೆಂಗಳೂರು: ನಾರಾಯಣಪುರ ಎಡದಂಡೆ ಕಾಲುವೆಯ ಎನ್‌ಎಲ್‌ಬಿಸಿ ಆಧುನೀಕರಣ ಯೋಜನೆ ಯಾರ ಕಾಲದಲ್ಲಿ ಆರಂಭಿಸಿದ್ದು ಎಂಬ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ವಾಕ್ಸಮರ ಆರಂಭವಾಗಿದೆ.

ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಗುರುವಾರ ಈ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಾಸಕ ಎಂ.ಬಿ.ಪಾಟೀಲ ಅವರ ಮಧ್ಯೆ ಟ್ವೀಟ್‌ ಸಮರವೂ ನಡೆದಿದೆ. ಬೊಮ್ಮಾಯಿ, ತಾವು ನೀರಾವರಿ ಸಚಿವರಾಗಿದ್ದಾಗ ಈ ಯೋಜನೆ ಆಧುನಿಕರಣಗೊಳಿಸುವುದಕ್ಕೆ ಸಂಬಂಧಿಸಿದ ಸಭೆಗಳ ನಡಾವಳಿಗಳ ದಾಖಲೆ ಬಿಡುಗಡೆ ಮಾಡಿದ್ದಾರೆ.

ಬೊಮ್ಮಾಯಿ ಹೇಳಿದ್ದೇನು: ‘2011–12 ನೇ ಸಾಲಿನಲ್ಲಿ ನ್ಯಾಷನಲ್‌ ವಾಟರ್‌ ಮಿಷನ್‌ ಅಡಿಯಲ್ಲಿ ಅಂದಿನ ಬಿಜೆಪಿ ಸರ್ಕಾರ ಎನ್‌ಎಲ್‌ಬಿಸಿ ಆಧುನಿಕ ಯೋಜನೆಗೆ ಅನುಮೋದನೆ ಪಡೆದಿತ್ತು. ಇದು ಬಿಜೆಪಿ ಸರ್ಕಾರದ ಕನಸಿನ ಯೋಜನೆಯಾಗಿತ್ತು. ಆದರೆ, 2014–15 ರವರೆಗೆ ಸಿದ್ದರಾಮಯ್ಯ ಸರ್ಕಾರ, ಕೇಂದ್ರದ ಯುಪಿಎ ಸರ್ಕಾರದಿಂದ ಯಾವುದೇ ಧನ ಸಹಾಯ ಪಡೆಯುವಲ್ಲಿ ವಿಫಲವಾಗಿತ್ತು’ ಎಂದು ಬೊಮ್ಮಾಯಿ ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ನಂತರ 2015 ರಲ್ಲಿ ಎನ್‌ಎಲ್‌ಬಿಸಿ–ಇಆರ್‌ಎಂ ಯೋಜನೆಯನ್ನು ಪಿಎಂಕೆಎಸ್‌ವೈ ಯೋಜನೆಯಡಿ ಪರಿಗಣಿಸಿ ಯೋಜನೆಗೆ ₹1,000 ಕೋಟಿ ಸಹಾಯಧನ ನೀಡಿದೆ. ಸ್ಕಾಡಾ 2 ನೇ ಹಂತದ ಬಹುತೇಕ ಕಾಮಗಾರಿ ಬಿಜೆಪಿ ಸರ್ಕಾರದಲ್ಲಿಯೇ ಅನುಷ್ಠಾನಗೊಂಡಿದೆ ಎಂದಿದ್ದಾರೆ.

ಎಂ.ಬಿ.ಪಾಟೀಲ ಹೇಳಿದ್ದೇನು:? ಸ್ಕಾಡಾ 2 ನೇ ಹಂತ ಸಮ್ಮಿಶ್ರ ಸರ್ಕಾರದಲ್ಲಿ ಆರಂಭಿಸಿದ್ದು. ಬಿಜೆಪಿ ಸರ್ಕಾರ ಯಾವುದೇ ನಿರ್ಣಾಯಕ ಅಭಿವೃದ್ಧಿ ಮಾಡದೇ ಇದ್ದರೂ ಹಿಂದಿನ ಸರ್ಕಾರದ ಕೆಲಸಗಳಿಗೆ ಮೈಲೇಜ್‌ ಪಡೆಯಲು ಹಿಂಜರಿಯುವುದಿಲ್ಲ ಎಂದು ಶಾಸಕ ಎಂ.ಬಿ.ಪಾಟೀಲ ಟ್ವೀಟ್‌ ಮಾಡಿದ್ದಾರೆ.

’ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ 2014 ರಲ್ಲಿ ಆರಂಭಿಸಿ 2017 ರಲ್ಲಿ ಕಾರ್ಯರೂಪಕ್ಕೆ ತಂದ ನನ್ನ ಕನಸಿನ ಸ್ಕಾಡಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುತ್ತಿರುವುದು ಹೆಮ್ಮೆ ತಂದಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.