ADVERTISEMENT

ನರೇಗಾ: ಕೇಂದ್ರಕ್ಕೆ ರಾಜ್ಯ ನಿಯೋಗ

ಮುಖ್ಯಮಂತ್ರಿ ನೇತೃತ್ವದಲ್ಲಿ ರಾಜ್ಯದ ಸಂಸದರ ಸಭೆ l ಅನುದಾನ ಬಿಡುಗಡೆಗೆ ಒತ್ತಡ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 17:41 IST
Last Updated 4 ಡಿಸೆಂಬರ್ 2018, 17:41 IST
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನಡೆಸಿದ ಸಂಸದರ ಸಭೆಯಲ್ಲಿ ಲೋಕಸಭಾ ಸದಸ್ಯರಾದ ವಿ.ಎಸ್ ಉಗ್ರಪ್ಪ, ಎಲ್.ಆರ್. ಶಿವರಾಮೇಗೌಡ, ಪ್ರಹ್ಲಾದ ಜೋಷಿ, ಎಸ್.ಪಿ. ಮುದ್ದಹನುಮೇಗೌಡ, ಬಿ.ಎನ್.ಚಂದ್ರಪ್ಪ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನಡೆಸಿದ ಸಂಸದರ ಸಭೆಯಲ್ಲಿ ಲೋಕಸಭಾ ಸದಸ್ಯರಾದ ವಿ.ಎಸ್ ಉಗ್ರಪ್ಪ, ಎಲ್.ಆರ್. ಶಿವರಾಮೇಗೌಡ, ಪ್ರಹ್ಲಾದ ಜೋಷಿ, ಎಸ್.ಪಿ. ಮುದ್ದಹನುಮೇಗೌಡ, ಬಿ.ಎನ್.ಚಂದ್ರಪ್ಪ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಬಾಕಿ ಇರುವ ₹ 964 ಕೋಟಿ ಅನುದಾನ ಬಿಡುಗಡೆಗೆ ಒತ್ತಡ ಹೇರಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ನಿಯೋಗ ಕೇಂದ್ರಕ್ಕೆ ತೆರಳಲಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.ರಾಜ್ಯವನ್ನು ಪ್ರತಿನಿಧಿಸುವ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಸಭೆಯಲ್ಲಿದ್ದರು.

‘ಈ ಯೋಜನೆಗೆ 2016–17ರಿಂದ ಅನುದಾನ ಬರಬೇಕಿದೆ. ಇದರಿಂದ ರಾಜ್ಯ ಸರ್ಕಾರ ಹೊರೆ ಹೊರುವಂತಾಗಿದೆ. ಈ ಬಗ್ಗೆ ಒತ್ತಡ ಹೇರುವಂತೆ ಸಂಸದರಿಗೆ ಕೋರಲಾಗಿದೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‌

ADVERTISEMENT

ರಾಜ್ಯದಲ್ಲಿ ವ್ಯಾಪಕವಾಗಿ ಬೆಳೆಯುವ ತೊಗರಿ, ಹೆಸರುಕಾಳು, ಕಬ್ಬು, ಭತ್ತ, ಈರುಳ್ಳಿ, ಟೊಮೆಟೊ, ತೆಂಗು ಬೆಳೆಗಾರರಿಗೆ ಸಕಾಲದಲ್ಲಿ ಬೆಂಬಲ ಬೆಲೆ ದೊರಕುತ್ತಿಲ್ಲ. ಈ ಸಂಬಂಧ ಕೇಂದ್ರದ ಸಚಿವರನ್ನು ಭೇಟಿ ಮಾಡಲಾಗಿದೆ. ಸಕಾಲಕ್ಕೆ ಬೆಂಬಲ ಬೆಲೆ ಪ್ರಕಟಿಸುವಂತೆ ಕೇಂದ್ರದ ಗಮನ ಸೆಳೆಯುವಂತೆ ಸಂಸದರಿಗೆ ಮನವಿ ಮಾಡಿದರು.

'ಸರ್ವ ಶಿಕ್ಷ ಅಭಿಯಾನದಲ್ಲಿ ಶೇ 60ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರ ಭರಿಸಬೇಕಿದೆ. ಈ ವರ್ಷ ಕೇಂದ್ರ ಸರ್ಕಾರ ₹560 ಕೋಟಿ ಕಡಿಮೆ ನೀಡಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಎರಡನೇ ಸಮವಸ್ತ್ರ ನೀಡಲು ಸಾಧ್ಯವಾಗುತ್ತಿಲ್ಲ. ಅದರ ಬಗ್ಗೆಯೂ ಸದನದಲ್ಲಿ ಧ್ವನಿ ಎತ್ತುವಂತೆ ವಿನಂತಿಸಿದ್ದೇನೆ’ ಎಂದು ಕುಮಾರಸ್ವಾಮಿ ತಿಳಿಸಿದರು.

ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆಗೆ ಕೇಂದ್ರ ಸರ್ಕಾರದಿಂದ ನಾಲ್ಕು ವರ್ಷಗಳಿಂದ ₹1110 ಕೋಟಿ ಬರಬೇಕಿದೆ. ಪಡಿತರ ವ್ಯವಸ್ಥೆ, ಬೆಂಬಲ ಬೆಲೆ ನೀಡಲು ಇದರಿಂದ ತೊಂದರೆಯಾಗಿದೆ ಎಂದು ಅವರು ತಿಳಿಸಿದರು.

‘ರಾಜ್ಯದ ನೆಲ, ಜಲ, ಅಭಿವೃದ್ಧಿ, ಕೈಗಾರಿಕೆ, ಕೃಷಿ, ವೈಮಾನಿಕ, ರಕ್ಷಣಾ ಇಲಾಖೆ ಸೇರಿದಂತೆ ಒಟ್ಟು 15 ಇಲಾಖೆಗಳಿಗೆ ಸಂಬಂಧಿಸಿದ ಪ್ರಸ್ತಾವಗಳು ಕೇಂದ್ರ ಸರ್ಕಾರದ ಮುಂದೆ ಪರಿಶೀಲನಾ ಹಂತದಲ್ಲಿವೆ. ಆರು ತಿಂಗಳಲ್ಲಿ ನಾನೂ ಸೇರಿದಂತೆ ಸಂಬಂಧಪಟ್ಟ ಸಚಿವರು ಅನೇಕ ಸಭೆ ನಡೆಸಿ ಒತ್ತಡ ಹೇರಿದ್ದೇವೆ. ಇವುಗಳಿಗೆ ಒಪ್ಪಿಗೆ ಸಿಗಲು ಸಂಸದರು ಸದನದಲ್ಲಿ ಧ್ವನಿ ಎತ್ತಬೇಕು’ ಎಂದು ಅವರು ಹೇಳಿದರು.

‘ಕೇಂದ್ರ ನೈಸರ್ಗಿಕ ವಿಕೋಪ ಪರಿಹಾರ ನಿಯಮಾವಳಿಗಳು ಪ್ರಸ್ತುತ ಸನ್ನಿವೇಶಕ್ಕೆ ಪೂರಕವಾಗಿರುವುದಿಲ್ಲ. ಅತ್ಯಲ್ಪ ಪರಿಹಾರ ಮೊತ್ತವನ್ನು ನಿಗದಿಪಡಿಸಿದೆ. ಈ ನಿಯಮಾವಳಿಗಳನ್ನು ಬದಲಿಸಿ ಹೆಚ್ಚು ಪರಿಹಾರಕ್ಕೆ ಅವಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ತರಬೇಕು’ ಎಂದರು.

ರಾಜ್ಯಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಕೇಳಬಹುದಾದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳನ್ನು ಎಲ್ಲಾ ಸಂಸದರಿಗೆ ಕಳುಹಿಸಿ
ಕೊಡಲು ಕುಮಾರಸ್ವಾಮಿ ಅವರು ದೆಹಲಿಯ ಸ್ಥಾನಿಕ ಆಯುಕ್ತರಿಗೆ ಸೂಚನೆ ನೀಡಿದರು.

**

‘ಮೇಕೆದಾಟು: ಸದನದಲ್ಲಿ ಧ್ವನಿ ಎತ್ತಿ’

‘ಮೇಕೆದಾಟು ಯೋಜನೆಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿದೆ. ಇದರ ವಿರುದ್ಧ ತಮಿಳುನಾಡು ಧ್ವನಿ ಎತ್ತಿದೆ. ಈ ವಿಷಯವನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ತಮಿಳುನಾಡಿನ ಸಂಸದರು ಪ್ರಸ್ತಾ‍ಪಿಸುವ ಸಾಧ್ಯತೆ ಇದೆ. ಇದಕ್ಕೆ ನಮ್ಮ ಸಂಸದರು ತಕ್ಕ ಉತ್ತರ ನೀಡಬೇಕು’ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

**

ಭೂಮಿ ಹಸ್ತಾಂತರ: ರಕ್ಷಣಾ ಅಧಿಕಾರಿಗಳ ತಕರಾರು
‘ಬೆಂಗಳೂರು ನಗರದಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ಭೂಮಿ ಹಸ್ತಾಂತರಿಸಲು ರಕ್ಷಣಾ ಸಚಿವರು ಒಪ್ಪಿಗೆ ನೀಡಿದ್ದಾರೆ. ಆದರೆ, ರಕ್ಷಣಾ ಇಲಾಖೆಯ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ’ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

‘ರಕ್ಷಣಾ ಭೂಮಿ ಹಸ್ತಾಂತರಿಸುವಂತೆ ಸಚಿವರು ಮೌಖಿಕ ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ಇಲಾಖೆಯ ಅಧಿಕಾರಿಗಳ ಜತೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರು ಹಲವು ಸುತ್ತಿನ ಸಂಧಾನ ನಡೆಸಿದ್ದಾರೆ. ಆದರೆ, ಸ್ಪಂದನೆ ಉತ್ತಮವಾಗಿಲ್ಲ. ಇದರಿಂದಾಗಿ, ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.