ADVERTISEMENT

ಕೇಂದ್ರದಿಂದ ಬಾರದ ನರೇಗಾ ಹಣ: ಸಿ.ಎಂ ಕಿಡಿ

ರಾಜ್ಯ ಸರ್ಕಾರದಿಂದಲೇ ₹938.96 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 19:26 IST
Last Updated 21 ಫೆಬ್ರುವರಿ 2019, 19:26 IST
   

ಬೆಂಗಳೂರು: ‘ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಇದರಿಂದ ಕೂಲಿ ಕಾರ್ಮಿಕರು ಸಮಸ್ಯೆಗೆ ಸಿಲುಕಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಯೋಜನೆಯ ಕುರಿತು ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಹಲವು ಬಾರಿ ಮನವಿ ಮಾಡಿದರೂ ಕೇಂದ್ರ ಹಣ ಬಿಡುಗಡೆ ಮಾಡಿಲ್ಲ. ಬೇರೆ ಯೋಜನೆಗಾಗಿ ಈ ಹಣ ಬಳಸಿಕೊಳ್ಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನರೇಗಾ ಕಾಯ್ದೆ ಅನ್ವಯ ಶೇ100ರಷ್ಟು ಕೂಲಿ ಮೊತ್ತ ಮತ್ತು ಶೇ 75ರಷ್ಟು ಸಾಮಗ್ರಿ ವೆಚ್ಚವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು. ಆದರೆ, 2018ರ ಡಿಸೆಂಬರ್ ತಿಂಗಳಿನಿಂದ ಕೂಲಿ ಮೊತ್ತ ಹಾಗೂ ನವೆಂಬರ್ ತಿಂಗಳಿನಿಂದ ಸಾಮಗ್ರಿ ವೆಚ್ಚ ಬಿಡುಗಡೆ ಆಗಿಲ್ಲ. ಉತ್ತರ ಕರ್ನಾಟಕದ ಜನರು ಗುಳೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಬಾಕಿ ಉಳಿದಿರುವ ₹438.96 ಕೋಟಿ ಮೊತ್ತವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ’ ಎಂದರು.

ADVERTISEMENT

‘ಕೇಂದ್ರ ಸರ್ಕಾರ ಈ ಹಿಂದಿನ ವರ್ಷಗಳಲ್ಲಿಯೂ ಅನುದಾನ ಬಿಡುಗಡೆ ಮಾಡದ ಕಾರಣ ರಾಜ್ಯ ಸರ್ಕಾರ ಭರಿಸಿದ ಮೊತ್ತವೂ ಸೇರಿ ಒಟ್ಟು ₹ 2,149.65 ಕೋಟಿ ಬಾಕಿ ಇದೆ. ಕೇಂದ್ರ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದ ಬಳಿಕ ಫೆ. 1ರಂದು ₹ 117 ಕೋಟಿ ಮಾತ್ರ ಬಿಡುಗಡೆಯಾಗಿದೆ. ಮುಂದಿನ ಎರಡು ತಿಂಗಳಿನಲ್ಲಿಯೂ ಕೇಂದ್ರದಿಂದ ಅನುದಾನ ಲಭ್ಯವಾಗುವುದು ಅನುಮಾನ. ಹೀಗಾಗಿ ಕೂಲಿ ಮೊತ್ತ ಇನ್ನೂ ₹ 500 ಕೋಟಿ ಮುಂಗಡ ಮಂಜೂರು ಮಾಡಲಾಗಿದೆ. ಒಟ್ಟು ಕೇಂದ್ರದ ಪಾಲಿನ ₹ 938.96 ಕೋಟಿ ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿದೆ’ ಎಂದು ವಿವರಿಸಿದರು.

‘ಬರ ಪರಿಹಾರಕ್ಕಾಗಿ ₹ 900 ಕೋಟಿ ಮಂಜೂರು ಮಾಡಿರುವುದಾಗಿ ಕೇಂದ್ರ ಘೋಷಿಸಿದೆ. ಆದರೆ, ಈವರೆಗೂ ಅನುದಾನ ಬಿಡುಗಡೆ ಆಗಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.

‘ರಾಜ್ಯದಲ್ಲಿ 8.5 ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿತ್ತು. ಈ ಗುರಿ 10 ಕೋಟಿಗೆ ಹೆಚ್ಚಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ 8.71 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

‘ಎಸ್‌ಐಟಿ ತನಿಖೆಗೆ ಆತುರ ಇಲ್ಲ’

‘ಆಡಿಯೊ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ನನಗೆ ಆತುರ ಇಲ್ಲ. ನ್ಯಾಯಯುತವಾಗಿ ತನಿಖೆ ನಡೆಯಬೇಕು. ಅದಕ್ಕಾಗಿ ಸಮಯಬೇಕು’ ಎಂದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ವಿಧಾನಸಭೆಯ ಸಭಾಧ್ಯಕ್ಷ ಕೆ.ಆರ್‌. ರಮೇಶ್ ಕುಮಾರ್ ಈಗಾಗಲೇ ಆರೋಪ ಮುಕ್ತರಾಗಿದ್ದಾರೆ. ಹಾಗೆಂದು ಆತುರವಾಗಿ ಎಲ್ಲ ಮಾಡಬೇಕು ಎಂದಲ್ಲ. ಬೇರೆ ವಿಷಯ ಇದೆಯಲ್ಲ, ಆ ಬಗ್ಗೆ ತನಿಖೆ ಆಗಬೇಕು’ ಎಂದು ಸಮರ್ಥನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.