ADVERTISEMENT

ರೈತರ ಆತ್ಮಹತ್ಯೆ ವಿಚಾರದಲ್ಲೂ ಸತ್ಯ ಮುಚ್ಚಿಡುವುದೇಕೆ?: ದಿನೇಶ್‌ ಗುಂಡೂರಾವ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಆಗಸ್ಟ್ 2022, 13:31 IST
Last Updated 12 ಆಗಸ್ಟ್ 2022, 13:31 IST
ದಿನೇಶ್‌ ಗುಂಡೂರಾವ್‌
ದಿನೇಶ್‌ ಗುಂಡೂರಾವ್‌   

ಬೆಂಗಳೂರು: ರೈತರ ಆತ್ಮಹತ್ಯೆ ವಿಚಾರವಾಗಿ ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಯ ಸಮಗ್ರ ವರದಿಯನ್ನು ಹಂಚಿಕೊಂಡಿರುವ ಅವರು, ‘2014 ರಿಂದ 2021ರ ಅವಧಿಯಲ್ಲಿ ‌ಸುಮಾರು 78 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೋದಿ ಅವಧಿಯಲ್ಲಿ ರೈತರ ಆತ್ಮಹತ್ಯೆಯೇ ‌ನಡೆದಿಲ್ಲ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಲೋಕಸಭೆಗೆ ತಿಳಿಸಿದ್ದರು. ಈಗ ಕೇಂದ್ರದ ಎನ್‌ಸಿಆರ್‌ಬಿ 78 ಸಾವಿರ ರೈತರ ಆತ್ಮಹತ್ಯೆಯ ವರದಿ‌ ನೀಡಿದೆ. ರೈತರ ಆತ್ಮಹತ್ಯೆ ವಿಚಾರದಲ್ಲೂ ಸತ್ಯ ಮುಚ್ಚಿಡುವುದ್ಯಾಕೆ?’ ಎಂದು ಪ್ರಶ್ನಿಸಿದ್ದಾರೆ.

‘ಮೋದಿಯವರು ಪ್ರತಿ ಭಾಷಣದಲ್ಲೂ ರೈತರ ಬದುಕು ಬೆಳಗುವ ಭಾಷಣ ಬಿಗಿಯುತ್ತಾರೆ.‌ ಮೋದಿಯವರು ರೈತರ ಬದುಕು ಬೆಳಗಿದ್ದರೆ, ರೈ‌ತರು ಯಾಕೆ ಸಾವಿನ ಹಾದಿ ತುಳಿಯಬೇಕು? ಮೂರು ಕರಾಳ ಕೃಷಿ ಕಾಯ್ದೆ ತಂದಾಗಲೇ‌‌ ಮೋದಿಯವರ ರೈತರ ಮೇಲಿನ ಕಾಳಜಿಯ ಬಂಡವಾಳ ಗೊತ್ತಾಗಿದೆ. ಮೋದಿ ಸರ್ಕಾರ ಯಾವತ್ತೂ ರೈತರ ಪರ ಸರ್ಕಾರವಾಗಿಲ್ಲ. ಇನ್ನು ಮುಂದೆಯೂ ಇರುವುದಿಲ್ಲ’ ಎಂದು ಟೀಕಿಸಿದ್ದಾರೆ.

ADVERTISEMENT

‘ರೈತರ ಆತ್ಮಹತ್ಯೆಗೆ ಅನೇಕ ಕಾರಣಗಳಿವೆ. ಬೆಳೆ ನಷ್ಟ, ಹವಮಾನ ವೈಪರೀತ್ಯ, ಸೂಕ್ತ ಬೆಲೆಯಿಲ್ಲದೆ ರೈತ ಹತಾಶನಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಅತಿ ಮುಖ್ಯವಾಗಿ ಸಾಲದ ಸುಳಿ ರೈತನ ಆತ್ಮಹತ್ಯೆಗೆ ಪ್ರಮುಖ ಕಾರಣ. ವಿಪರ್ಯಾಸವೆಂದರೆ ಮೋದಿಯವರು ಕಾರ್ಪೊರೇಟ್ ಕುಳಗಳ ಸಾಲ ಮನ್ನಾ ಮಾಡುತ್ತಾರೆ. ಆದರೆ ರೈತರ ಸಾಲ ಯಾಕೆ ಮನ್ನಾ ಮಾಡುವುದಿಲ್ಲ?’ ಎಂದು ಕೇಳಿದ್ದಾರೆ.

‘ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ವರ್ಷಕ್ಕೆ 12 ಸಾವಿರ ಕೊಟ್ಟರೆ ರೈತರ ಬದುಕು ಬಂಗಾರವಾಗಲಿದೆ ಎಂದು ಮೋದಿಯವರು ಭಾವಿಸಿದ್ದಾರೆ. 50ಕೆಜಿ ಡಿಎಪಿ ಗೊಬ್ಬರದ ಬೆಲೆ ಎಷ್ಟಿದೆ ಎಂದು ಮೋದಿಯವರಿಗೆ ಗೊತ್ತಿದೆಯೇ? ದೊಡ್ಡ ಮಟ್ಟದ ಆರ್ಥಿಕ ಚೈತನ್ಯ ಸಿಕ್ಕರೆ ಮಾತ್ರ ರೈತರ ಬದುಕು ಸುಧಾರಿಸಬಹುದು. ಇಲ್ಲದಿದ್ದರೆ ರೈತರ ಆತ್ಮಹತ್ಯೆಗೆ ಕೊನೆಯೇ ಇರುವುದಿಲ್ಲ‘ ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.