ADVERTISEMENT

ಎನ್ಇಪಿ ಭವಿಷ್ಯದ ದಿಕ್ಸೂಚಿ: ರಾಜ್ಯಪಾಲ‌ ಥಾವರಚಂದ್ ಗೆಹಲೋತ್

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 16:57 IST
Last Updated 26 ಡಿಸೆಂಬರ್ 2021, 16:57 IST
ರಾಜ್ಯಪಾಲ ಥಾವರಚಂದ್ ಗೆಹಲೋತ್
ರಾಜ್ಯಪಾಲ ಥಾವರಚಂದ್ ಗೆಹಲೋತ್    

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಭಾರತದ ಭವಿಷ್ಯಕ್ಕೆ ದಿಕ್ಸೂಚಿಯಾಗಲಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.

ಮಾಗಡಿ ರಸ್ತೆಯ ಚನ್ನೇನಹಳ್ಳಿಯಲ್ಲಿರುವ ಜನ ಸೇವಾ ವಿದ್ಯಾ ಕೇಂದ್ರದ ಪೂರ್ಣ ಮಂಡಲೋತ್ಸವ ಮತ್ತು ಸ್ವರ್ಣ ಜಯಂತಿ ವರ್ಷ ಆಚರಣೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಶಿಕ್ಷಣ ವ್ಯವಸ್ಥೆಯು ಪಾಶ್ಚಿಮಾತ್ಯರ ಪ್ರಭಾವದಿಂದ ವಿರೂಪಗೊಂಡಿತ್ತು. ಶಿಕ್ಷಣದ ಗುರಿ, ಉದ್ದೇಶ ಮತ್ತು ಕಲಿಕಾ ವಿಧಾನಗಳು ಬದಲಾಗಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಾಸೆಯಂತೆ ರೂಪುಗೊಂಡಿರುವ ಎನ್ಇಪಿ ಶಿಕ್ಷಣವನ್ನು ಮರಳಿ ಸರಿ ದಾರಿಗೆ ತರಲಿದೆ ಎಂದರು.

ADVERTISEMENT

ಈ ಶತಮಾನದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹೊಂದಿರುವುದು ಭಾರತಕ್ಕೆ ಮತ್ತಷ್ಟು ಬಲ‌ ನೀಡಲಿದೆ. ಪ್ರಾಚೀನ ಮತ್ತು ಆಧುನಿಕ ಶಿಕ್ಷಣ ಪದ್ಧತಿಗಳ ಮಿಶ್ರಣದೊಂದಿಗೆ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕಿದೆ ಎಂದು ಹೇಳಿದರು.

ಚಾರಿತ್ರ್ಯ ನಿರ್ಮಾಣವೇ ಮುಖ್ಯ: ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮಾತನಾಡಿ, 'ಶಿಕ್ಷಣ ಎಂದರೆ ಕೇವಲ ಕಲಿಕೆ ಮತ್ತು ಅಂಕ ಗಳಿಕೆ ಅಲ್ಲ. ಚಾರಿತ್ರ್ಯ ನಿರ್ಮಾಣವೇ ಭಾರತೀಯ ಶಿಕ್ಷಣ ವ್ಯವಸ್ಥೆಯ ಗುರಿ. ಶಿಕ್ಷಣದ ಮೂಲಕ ನಾಗರಿಕತೆಯೊಂದನ್ನು ಕಟ್ಟುತ್ತಿದ್ದೇವೆ ಎಂಬ ಎಚ್ಚರಿಕೆಯಲ್ಲಿ ನಾವು ಮುನ್ನಡೆಯಬೇಕು' ಎಂದರು.

ಚಾರಿತ್ರ್ಯ ಇಲ್ಲದ ಶಿಕ್ಷಣ ಅಹಂಕಾರಕ್ಕೆ ಕಾರಣವಾಗುತ್ತದೆ. ಸೇವಾ ಭಾವನೆಯಿಲ್ಲದ ಶಿಕ್ಷಣದಿಂದ ಸ್ವಾರ್ಥ, ಇನ್ನೊಬ್ಬರ ಸಂಕಟ ಅರಿಯುವುದನ್ನು ಕಲಿಸದ ಶಿಕ್ಷಣದಿಂದ ಕಂಟಕ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

ಶಿಕ್ಷಣ ತರಗತಿಗೆ ಸೀಮಿತ ಆಗಬಾರದು. ಸುತ್ತಲಿನ ಪರಿಸರದ ಜತೆಗೆ ಒಡನಾಡಿಕೊಂಡು ಕಲಿಯುವುದು ಮುಖ್ಯ. ಶಿಕ್ಷಣದಿಂದ ಸರಿಯಾದ ವ್ಯಕ್ತಿತ್ವಗಳನ್ನು ನಿರ್ಮಿಸದಿದ್ದರೆ ದೇಶಕ್ಕೆ ಯಾವ ಲಾಭವೂ ಆಗುವುದಿಲ್ಲ ಎಂದರು.

ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದಜೀ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು.

ಜನಸೇವಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಗುಪ್ತ, ಸದಸ್ಯರಾದ ರಾಮಚಂದ್ರ ಭಟ್ ಕೋಟೆಮನೆ, ಎನ್.ತಿಪ್ಪೇಸ್ವಾಮಿ, ಗೌರವ ಕಾರ್ಯದರ್ಶಿ ನಿರ್ಮಲ್ ಕುಮಾರ್ ಇದ್ದರು.

ಸ್ವರ್ಣ ಜಯಂತಿಗೆ ಹಲವು ಯೋಜನೆ

‘ಜನಸೇವಾ ವಿದ್ಯಾ ಕೇಂದ್ರದ ಸ್ವರ್ಣ ಜಯಂತಿ ಅಂಗವಾಗಿ 50ಕ್ಕೂ ಹೆಚ್ಚು ಹಸುಗಳ ನಿರ್ವಹಣೆ, ಭಾರತೀಯ ವೈದ್ಯ ಪದ್ಧತಿಯಡಿ ಚಿಕಿತ್ಸಾ ಸೌಲಭ್ಯ, ರಾಷ್ಟ್ರೀಯ ಮಟ್ಟದ ಗುರುಕುಲ ಸಮ್ಮೇಳನ, ಐದು ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಪರಿವರ್ತಿಸುವುದು, 50 ಗ್ರಾಮಗಳ ಉನ್ನತಿ ಸೇರಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಜನಸೇವಾ ವಿಶ್ವಸ್ಥ ಮಂಡಳಿಯ ಸದಸ್ಯ ರಾಮಚಂದ್ರ ಭಟ್‌ ಕೋಟೆಮನೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.