ADVERTISEMENT

ಶಿವಮೊಗ್ಗದಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ರಕ್ಷಾ ವಿ.ವಿ ಕಾರ್ಯಾರಂಭ

ಕರ್ನಾಟಕಕ್ಕೆ ರಾಷ್ಟ್ರೀಯ ರಕ್ಷಾ ವಿ.ವಿ ಮಂಜೂರು: ಗೃಹ ಸಚಿವ ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 11:12 IST
Last Updated 28 ಫೆಬ್ರುವರಿ 2023, 11:12 IST
   

ಶಿವಮೊಗ್ಗ: ರಾಷ್ಟ್ರೀಯ ರಕ್ಷಾ (ರಕ್ಷಣಾ) ವಿಶ್ವವಿದ್ಯಾಲಯ ಕರ್ನಾಟಕಕ್ಕೆ ಮಂಜೂರು ಆಗಿದೆ. ಶಿವಮೊಗ್ಗದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗುಜರಾತ್‌ನ ಅಹಮದಾಬಾದ್‌ನಲ್ಲಿ ರಕ್ಷಾ ವಿಶ್ವವಿದ್ಯಾಲಯ ಇದ್ದು, ಈಗ ಕರ್ನಾಟಕದಲ್ಲಿ ದೇಶದ ಎರಡನೇ ವಿಶ್ವವಿದ್ಯಾಲಯ ಆರಂಭವಾಗಲಿದೆ. ನೂತನ ವಿಶ್ವವಿದ್ಯಾಲಯಕ್ಕೆ ಶಿವಮೊಗ್ಗ ಸಮೀಪದ ನವುಲೆ ಬಳಿ ಜಿಲ್ಲಾಡಳಿತ ಎಂಟು ಎಕರೆ ಜಮೀನು ಮಂಜೂರು ಮಾಡಿದೆ ಎಂದರು.

ವಿಶ್ವವಿದ್ಯಾಲಯ ಇದೇ ಶೈಕ್ಷಣಿಕ ವರ್ಷದಿಂದ ಅರಂಭವಾಗಲಿದೆ. ಸದ್ಯ ತಾತ್ಕಾಲಿಕವಾಗಿ ರಾಗಿಗುಡ್ಡದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಟ್ಟಡದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.

ADVERTISEMENT

ಕೇಂದ್ರದ ಗೃಹ ಇಲಾಖೆಯ ಅಧೀನದಲ್ಲಿ ಈ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಲಿದೆ. ಯುಜಿಸಿ ಮಾನ್ಯತೆ ಹೊಂದಿರಲಿದೆ. ಸೇನೆ ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿಷಯಗಳನ್ನು ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ಪದವಿ ರೂಪದಲ್ಲಿ ಕಲಿಯಬಹುದಾಗಿದೆ. ದ್ವಿತೀಯ ಪಿಯುಸಿ ಮುಗಿದ ನಂತರ ಪ್ರವೇಶ ಪಡೆಯಬಹುದಾಗಿದೆ ಎಂದರು.

ಇಲ್ಲಿ ಕಲಿತ ವಿದ್ಯಾರ್ಥಿಗಳು ಪೊಲೀಸ್ ಮತ್ತು ಸೇನೆಗೆ ನೇರ ನೇಮಕಾತಿ ಆಗಬಹುದಾಗಿದೆ. ಇದೊಂದು ವೃತ್ತಿ ಭದ್ರತೆಯ ಕಲಿಕೆ ಆಗಿದೆ. ಪ್ರವೇಶ ಪರೀಕ್ಷೆಯ ಮೂಲಕ ಮೆರಿಟ್ ಆಧಾರದ ಮೇಲೆ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನೂತನ ವಿಶ್ವವಿದ್ಯಾಲಯದಲ್ಲಿ ಸದ್ಯ ಡಿಪ್ಲೊಮಾ ಇನ್ ಪೊಲೀಸ್ ಸೈನ್ಸ್, ಬೇಸಿಕ್ ಕೋರ್ಸ್ ಇನ್ ಕಾರ್ಪೋರೇಟ್ ಸೆಕ್ಯೂರಿಟಿ ಮ್ಯಾನೇಜ್‌ಮೆಂಟ್, ಡಿಪ್ಲೊಮಾ ಇನ್ ಕ್ರಿಮಿನಲ್ ಇನ್ವೆಸ್ಟಿಗೇಶನ್, ಪಿಜಿ ಡಿಪ್ಲೊಮಾ ಇನ್ ಸೈಬರ್ ಸೆಕ್ಯೂರಿಟಿ ಆಂಡ್ ಸೈಬರ್ ಲಾ, ರೋಡ್ ಟ್ರಾಫಿಕ್ ಸೇಫ್ಟಿ ಮ್ಯಾನೇಜ್‌ಮೆಂಟ್, ದೈಹಿಕ ಸಾಮರ್ಥ್ಯ ನಿರ್ವಹಣೆಯ ಎರಡು ವಾರಗಳ ಸರ್ಟಿಫಿಕೇಟ್ ಕೋರ್ಸ್ ಮತ್ತು ಪಿಜಿ ಡಿಪ್ಲೊಮಾ ಇನ್ ಕೋಸ್ಟಲ್ ಸೆಕ್ಯೂರಿಟಿ, ಲಾ ಎನ್ಫೋರ್ಸ್ಮೆಂಟ್ ಕೋರ್ಸ್‌ಗಳನ್ನು ಬೋಧನೆ ಮಾಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.