ADVERTISEMENT

ಅನ್ಯ ಉದ್ದೇಶಕ್ಕೆ ಮತದಾರರ ಚೀಟಿ ಬಳಸದಂತೆ ಕಾನೂನು: ಸಂಜೀವ್ ಕುಮಾರ್

ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಇ–ಎಪಿಕ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 18:54 IST
Last Updated 25 ಜನವರಿ 2021, 18:54 IST
ಸಾಂಪ್ರದಾಯಿಕ ವೇಷದಲ್ಲಿಯೇ ಮತದಾರರ ಗುರುತಿನ ಚೀಟಿ ಪಡೆದ ಬುಡಕಟ್ಟು ಸಮುದಾಯದ ಯುವಕರು ಚೀಟಿಯನ್ನು ಪ್ರದರ್ಶಿಸಿದ್ದು ಹೀಗೆ ಪ್ರಜಾವಾಣಿ ಚಿತ್ರ : ಅನೂಪ್ ರಾಘ.ಟಿ.
ಸಾಂಪ್ರದಾಯಿಕ ವೇಷದಲ್ಲಿಯೇ ಮತದಾರರ ಗುರುತಿನ ಚೀಟಿ ಪಡೆದ ಬುಡಕಟ್ಟು ಸಮುದಾಯದ ಯುವಕರು ಚೀಟಿಯನ್ನು ಪ್ರದರ್ಶಿಸಿದ್ದು ಹೀಗೆ ಪ್ರಜಾವಾಣಿ ಚಿತ್ರ : ಅನೂಪ್ ರಾಘ.ಟಿ.   

ಬೆ‌ಂಗಳೂರು: ‘ಚುನಾವಣಾ ಆಯೋಗ ವಿತರಿಸುವ ಮತದಾರರ ಗುರುತಿನ ಚೀಟಿಯು ಮತದಾನಕ್ಕೆ ಮಾತ್ರ ಸೀಮಿತ. ಅದನ್ನು ಅನ್ಯ ಉದ್ದೇಶಕ್ಕೆ ಬಳಸುವುದು ತಪ್ಪು‌. ಚುನಾವಣೆ ಉದ್ದೇಶಕ್ಕೆ ಮಾತ್ರ ಈ ಗುರುತಿನ ಚೀಟಿ ಬಳಸುವಂತೆ ಕಾನೂನು ತರಲಾಗುವುದು’ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಡಾ. ಸಂಜೀವ್ ಕುಮಾರ್ ಹೇಳಿದರು.

ನಗರದ ಪುರಭವನದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಇ–ಎಪಿಕ್ ಕಾರ್ಡ್‌ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ವಿಳಾಸ ದೃಢೀಕರಣ ಸೇರಿದಂತೆ ಮತ್ತಿತರ ಉದ್ದೇಶಗಳಿಗೆ ಈ ಚೀಟಿ ಬಳಸಲಾಗುತ್ತಿದೆ. ಅಲ್ಲದೆ, ಮತದಾರರ ಗುರುತಿನ ಚೀಟಿ ವಿತರಣೆ ಹೆಸರಿನಲ್ಲೂ ವಂಚನೆ ಜಾಲ ತಲೆ ಎತ್ತಿದ್ದು, ಅಂಥವರ ವಿರುದ್ಧ ಈಗಾಗಲೇ ಮೊಕದ್ದಮೆಯೂ ದಾಖಲಿಸಲಾಗುತ್ತಿದೆ’ ಎಂದರು.

ಇವಿಎಂ ಪ್ರಶ್ನಿಸುತ್ತಾರೆ, ದೋಷ ಹೇಳುವುದಿಲ್ಲ

ADVERTISEMENT

‘ಚುನಾವಣೆಯಲ್ಲಿ ಸೋತವರು ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಸರಿ ಇಲ್ಲ ಎಂದು ದೂಷಿಸುತ್ತಾರೆ. ಗೆದ್ದವರು ಸರಿ ಇದೆ ಎನ್ನುತ್ತಾರೆ. ಇವಿಎಂಗಳ ಬಗ್ಗೆ ದೂಷಿಸುವವರು ಅದನ್ನು ಸಾಬೀತು ಪಡಿಸಲು ಮುಂದೆ ಬರುವುದಿಲ್ಲ’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹೇಳಿದರು.

‘ಇವಿಎಂ ಸರಿ ಇಲ್ಲ ಎಂದು ಯಾವುದೇ ಲೀಡರ್‌ ಹೇಳಿದ ತಕ್ಷಣ ಅದನ್ನು ಮಾಧ್ಯಮಗಳು ದೊಡ್ಡ ಸುದ್ದಿ ಮಾಡುತ್ತವೆ. ಆರೋಪ ಸಾಬೀತುಪಡಿಸಲುಆ ನಾಯಕರು ವಿಫಲವಾದಾಗ ಮಾಧ್ಯಮಗಳು ಅದನ್ನು ದೊಡ್ಡ ಸುದ್ದಿ ಮಾಡುವುದಿಲ್ಲ’ ಎಂದರು.

ಚುನಾವಣಾ ಆಯೋಗವು ನೀಡುವ 2021ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, 'ಇದು ಇಡೀ ಬಿಬಿಎಂಪಿಗೆ ಸಂದ ಗೌರವ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.