ADVERTISEMENT

ಕೋವಿಡ್‌-19ನಿಂದ ಸಾವು: ಮಹಿಳೆಯರಿಂದಲೇ ಗೌರವದ ಅಂತ್ಯಕ್ರಿಯೆ

ನ್ಯಾಷನಲ್‌ ವಿಮೆನ್‌ ಫ್ರಂಟ್‌ನಿಂದ ಮೃತ ಮಹಿಳೆಗೆ ಸೇವೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 21:33 IST
Last Updated 25 ಏಪ್ರಿಲ್ 2021, 21:33 IST
ಬಂಟ್ವಾಳದಲ್ಲಿ ಮೃತಪಟ್ಟ ಬೆಂಗಳೂರಿನ ಮಹಿಳೆಯ ಅಂತ್ಯಸಂಸ್ಕಾರ ಮಾಡಿದ ಮಹಿಳಾ ತಂಡ
ಬಂಟ್ವಾಳದಲ್ಲಿ ಮೃತಪಟ್ಟ ಬೆಂಗಳೂರಿನ ಮಹಿಳೆಯ ಅಂತ್ಯಸಂಸ್ಕಾರ ಮಾಡಿದ ಮಹಿಳಾ ತಂಡ   

ಮಂಗಳೂರು: ಕೋವಿಡ್–19ನಿಂದ ಮೃತಪಟ್ಟ ಮಹಿಳೆಯರ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸುವ ಕಾರ್ಯದಲ್ಲಿ ನ್ಯಾಷನಲ್ ವಿಮೆನ್ ಫ್ರಂಟ್‌ನ ತಂಡ ತೊಡಗಿದೆ. ಕೋವಿಡ್‌ನಿಂದ ಮೃತಪಟ್ಟವರ ಶವದ ಸಮೀಪಕ್ಕೆ ಬರಲೂ ಹಿಂದೇಟು ಹಾಕುವ ಸಂದರ್ಭದಲ್ಲಿ ಮಹಿಳೆಯರ ತಂಡವೇ ಈ ಕಾರ್ಯವನ್ನು ನಿರ್ವಹಿಸುತ್ತಿದೆ.

ಕಳೆದ ವರ್ಷದ ಕೋವಿಡ್–19 ಪಿಡುಗು ಉಲ್ಬಣಿಸಿದ ಸಂದರ್ಭದಲ್ಲಿಯೂ ಈ ತಂಡ ಇದೇ ರೀತಿಯ ಕಾರ್ಯವನ್ನು ಮಾಡುತ್ತಿತ್ತು. ಈಗಲೂ ಮತ್ತೊಮ್ಮೆ ತಮ್ಮ ಸೇವೆಯನ್ನು ಮುಂದುವರಿಸಿದೆ. ಕೆಲದಿನಗಳ ಹಿಂದೆ ಬಂಟ್ವಾಳದಲ್ಲಿ ಮೃತಪಟ್ಟಿದ್ದ ಬೆಂಗಳೂರಿನ ಮಹಿಳೆಯೊಬ್ಬರ ಅಂತ್ಯಕ್ರಿಯೆಯನ್ನು ಈ ತಂಡವೇ ಮಾಡಿದೆ.

‘ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಇಂತಹ ತಂಡಗಳನ್ನು ಮಾಡಲಾಗಿದೆ. ಐದು ಮತ್ತು ಆರು ಮಂದಿ ಮಹಿಳೆಯರಿರುವ ಇಂತಹ ತಂಡಗಳಿಗೆ ಅಗತ್ಯ ತರಬೇತಿಯನ್ನು ನೀಡಲಾಗಿದೆ’ ಎಂದು ಫ್ರಂಟ್‌ನ ಅಧ್ಯಕ್ಷೆ ಝೀನತ್‌ ತಿಳಿಸಿದ್ದಾರೆ.

ADVERTISEMENT

‘ಕೋವಿಡ್–19 ನಿಂದ ಮೃತಪಟ್ಟವರ ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸದೇ ಆಡಳಿತದ ವತಿಯಿಂದಲೇ ನಡೆಸಲಾಗುತ್ತಿತ್ತು. ಅಂತ್ಯಕ್ರಿಯೆ ಗೌರವದಿಂದ ನಡೆಯಬೇಕು ಎಂಬ ಉದ್ದೇಶದಿಂದ ತಂಡಗಳು ರಚನೆಯಾಗಿವೆ. ಪಿಪಿಇ ಕಿಟ್‌ ಧರಿಸಿ, ಮುಂಜಾಗ್ರತೆಯೊಂದಿಗೆ ಧಾರ್ಮಿಕ ವಿಧಿಯಂತೆ ಅಂತ್ಯಕ್ರಿಯೆ ನಡೆಸಲಾಗುತ್ತಿದೆ’ ಎಂದಿದ್ದಾರೆ.

‘ಅಂತ್ಯಸಂಸ್ಕಾರ ನಡೆಸುವ ಬಗ್ಗೆ ನಮಗೆ ತರಬೇತಿ ನೀಡಲಾಗಿದೆ. ವೈಜ್ಞಾನಿಕ ಕ್ರಮದಲ್ಲಿಯೇ ಅಂತ್ಯಕ್ರಿಯೆ ಮಾಡಲಾಗುತ್ತಿದೆ’ ಎಂದು ತಂಡದ ಸದಸ್ಯೆ ಫಾತಿಮಾ ನಸೀಮ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.