ADVERTISEMENT

ಶತಮಾನಗಳ ಇತಿಹಾಸವಿರುವ ನವಲಗುಂದ ಜಮಖಾನಗಳ ಉತ್ಪಾದನೆಗೆ ಕಾಡುತ್ತಿದೆ ತಯಾರಕರ ಕೊರತೆ

ಶತಮಾನಗಳ ಇತಿಹಾಸವಿರುವ ಜಮಖಾನಗಳು; ಸೂಕ್ತ ತರಬೇತಿ, ಆರ್ಥಿಕ ನೆರವಿನ ನಿರೀಕ್ಷೆ

ಗೋವರ್ಧನ ಎಸ್‌.ಎನ್‌.
Published 13 ಅಕ್ಟೋಬರ್ 2025, 1:20 IST
Last Updated 13 ಅಕ್ಟೋಬರ್ 2025, 1:20 IST
ನವಲಗುಂದ ಜಮಖಾನ
ನವಲಗುಂದ ಜಮಖಾನ   

ಹುಬ್ಬಳ್ಳಿ: ಶತಮಾನಗಳ ಇತಿಹಾಸವುಳ್ಳ ಮತ್ತು ಭೌಗೋಳಿಕ ಮಾನ್ಯತೆ (ಜಿಐ) ಪಡೆದಿರುವ ಧಾರವಾಡ ಜಿಲ್ಲೆ ನವಲಗುಂದದ ಧುರಿಗಳ (ಜಮಖಾನ) ಉತ್ಪಾದನೆಗೆ ತಯಾರಕರ ಕೊರತೆ ಕಾಡುತ್ತಿದೆ.

ನವಲಗುಂದದ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ (ಕಾವೇರಿ ಎಂಪೋರಿಯಂ) ಘಟಕದಲ್ಲಷ್ಟೇ ಸದ್ಯ ಜಮಖಾನಗಳ ಉತ್ಪಾದನೆ ಆಗುತ್ತಿದೆ. ಇವುಗಳ ಉತ್ಪಾದನೆ ಮಾಡುವವರ ಸಂಖ್ಯೆ 17ಕ್ಕೆ ಇಳಿದಿದೆ.

‘ಪಾರಂಪರಿಕ ನೇಯ್ಗೆ ಕಲೆಯನ್ನು ಮಕ್ತುಲ್‌ ಸಾಬ್‌ ಜಮಖಾನ್ದಾರ್‌ ಅವರು ನಮಗೆ ಕಲಿಸಿದರು. ನಾನು ತರಬೇತಿ ಪಡೆದಾಗ 150ಕ್ಕೂ ಹೆಚ್ಚು ಮಂದಿ ಕಾರ್ಮಿಕರು ತಯಾರಿಸುತ್ತಿದ್ದರು. ಕ್ರಮೇಣ ಅವರ ಸಂಖ್ಯೆ ಕುಸಿಯುತೊಡಗಿತು’ ಎಂದು ನವಲಗುಂದ ನೇಕಾರರ ಸಂಘದ ಅಧ್ಯಕ್ಷೆ ಫರ್ಜಾನ ಶಿರಸಂಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಜಮಖಾನ ತಯಾರಿಸುವವರಿಗೆ ಸರ್ಕಾರದಿಂದ ವಿಶೇಷ ನೆರವು ಇಲ್ಲ. ಜಮಖಾನ ಮಾರಾಟದಿಂದ ತಿಂಗಳಿಗೆ ₹2 ಲಕ್ಷದವರೆಗೆ ಆದಾಯಗಳಿಸುವ ಸಾಧ್ಯತೆ ಇದ್ದರೂ, ತಯಾರಕರ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ. ಒಂದೊಂದು ಜಮಖಾನ ದರ ₹ 1 ಸಾವಿರದಿಂದ ₹ 10 ಸಾವಿರದವರೆಗೆ ಇರುತ್ತದೆ. ಸದ್ಯ ತಿಂಗಳಿಗೆ 100 ರಿಂದ 200 ಜಮಖಾನ ತಯಾರಿಸಲಾಗುತ್ತಿದೆ’ ಎಂದರು. 

ಉತ್ತಮ ಬೇಡಿಕೆ: ‘ಪ್ರಾಚೀನ ಕಾಲದ ಕರಕುಶಲ ಉತ್ಪನ್ನವಾದ ಜಮಖಾನದ ಚಾರ್ಮೂರ್, ಪಗಡೆ ವಿಧಕ್ಕೆ ಸಾಕಷ್ಟು ಬೇಡಿಕೆ ಇದೆ. ನವಲಗುಂದದಲ್ಲಿರುವ ಘಟಕಕ್ಕೆ ಸೌಲಭ್ಯ ನೀಡಲಾಗಿದೆ. ಉತ್ಪನ್ನವಾರು ತಯಾರಕರಿಗೆ ಸಂಬಳ ನೀಡಲಾಗುತ್ತಿದೆ’ ಎಂದು ಘಟಕದ ಯೋಜನಾಧಿಕಾರಿ ರಮೇಶ ತಿಳಿಸಿದರು. 

ನವಲಗುಂದ ಜಮಖಾನ
ನವಲಗುಂದ ಜಮಖಾನ

ವಿಜಯಪುರದಿಂದ ವಲಸೆ ಬಂದ ಕುಶಲಕರ್ಮಿಗಳು ಮುಸ್ಲಿಂ ಮಹಿಳೆಯರಿಂದ ಕಲೆ ಮುಂದುವರಿಕೆ 

2016ರಲ್ಲಿ 30 ಜನರಿಗೆ ತರಬೇತಿ ನೀಡಲಾಗಿತ್ತು. ಹೊಸದಾಗಿ ತರಬೇತಿ ನೀಡಲು ಸರ್ಕಾರ ಅನುಮೋದನೆ ನೀಡಿದ ಬಳಿಕ ತರಬೇತಿ ಆರಂಭಿಸಲಾಗುತ್ತದೆ
ರಮೇಶ, ಯೋಜನಾಧಿಕಾರಿ, ನವಲಗುಂದ ಜಮಖಾನ ಉತ್ಪಾದನಾ ಘಟಕ
ನವಲಗುಂದ ಜಮಖಾನ ಅಭಿವೃದ್ಧಿಗೆ ಪ್ರತ್ಯೇಕ ಯೋಜನೆ ಇಲ್ಲ. ಶೀಘ್ರದಲ್ಲೇ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸುವೆ. ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.
ಎಚ್‌.ಬಿ. ಪಾಟೀಲ, ಕೈಮಗ್ಗ ಮತ್ತು ಜವಳಿ ಇಲಾಖೆ ಧಾರವಾಡ

‘ಪರಂಪರೆಯೂ ಕಾರಣ’

‘ಜಮಖಾನ ಉತ್ಪಾದನೆ ಮಾರಾಟದ ಹೊಣೆಯನ್ನು ಸರ್ಕಾರ ವಹಿಸಿಕೊಂಡಿದೆ. ಹೊಸದಾಗಿ ತರಬೇತಿ ಪಡೆದವರು ಆ ಕೆಲಸ ಮುಂದುವರಿಸುವುದಿಲ್ಲ. ಮುಖ್ಯವಾಗಿ ಕೌಶಲ ಗೊತ್ತಿರುವವರು ಮನೆಯ ಹೆಣ್ಣುಮಕ್ಕಳಿಗೆ ಕಲಿಸುವುದಿಲ್ಲ. ಹೊಸ ಪೀಳಿಗೆ ಅವರಿಗೆ ಈ ಬಗ್ಗೆ ಆಸಕ್ತಿ ಇಲ್ಲ. ತಯಾರಕದ ಸಂಖ್ಯೆ ಕುಸಿಯಲು ಇದೂ ಕಾರಣ’ ಎಂದು ಕೈಮಗ್ಗ ಹಾಗೂ ಜವಳಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.