ADVERTISEMENT

ಗುಂಡಿನ ಕಾಳಗ: ನಕ್ಸಲ್ ಸಾವು

ವಯನಾಡು ಘಟನೆ: ಕರ್ನಾಟಕದವರೂ ಭಾಗಿಯಾಗಿರುವ ಶಂಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 19:21 IST
Last Updated 7 ಮಾರ್ಚ್ 2019, 19:21 IST
   

ಮೈಸೂರು/ ಮಡಿಕೇರಿ: ವಯನಾಡು ಜಿಲ್ಲೆಯ ಅರಣ್ಯದಂಚಿನಉಪವನ ರೆಸಾರ್ಟ್‌ನಲ್ಲಿ ಗುರುವಾರ ನಸುಕಿನಲ್ಲಿ ನಕ್ಸಲರು ಹಾಗೂ ಪೊಲೀಸರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಶಂಕಿತ ನಕ್ಸಲ್ ಜಲೀಲ್ ಎಂಬಾತ ಮೃತಪಟ್ಟಿದ್ದಾನೆ. ಉಳಿದವರ ಪತ್ತೆಗಾಗಿ ಶೋಧ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಕರ್ನಾಟಕದ ಎಚ್.ಡಿ.ಕೋಟೆ ಹಾಗೂ ಕೊಡಗಿನ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಕೋಯಿಕೋಡ್– ಬೆಂಗಳೂರು ಹೆದ್ದಾರಿಯ ಲಕ್ಕಿಡಿ ಬಳಿಯ ರೆಸಾರ್ಟ್‌ನಲ್ಲಿ 10ಕ್ಕೂ ಹೆಚ್ಚು ಮಂದಿ ನಕ್ಸಲ್ ತಂಡವೊಂದು ಬುಧವಾರ ರಾತ್ರಿ ಊಟ ನೀಡುವಂತೆ ಒತ್ತಾಯಿಸಿದೆ. ಊಟ ನೀಡದಿದ್ದರೆ ರೆಸಾರ್ಟ್‌ನಲ್ಲಿ ತಂಗಿರುವವರನ್ನು ಒತ್ತೆಯಾಳಾಗಿ ಇರಿಸಿಕೊಳ್ಳುವುದಾಗಿಯೂ ಬೆದರಿಕೆ ಒಡ್ಡಿದೆ. ರೆಸಾರ್ಟ್‌ ಸಿಬ್ಬಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ನಕ್ಸಲ್ ನಿಗ್ರಹ ಪಡೆ ಹಾಗೂ ನಕ್ಸಲರ ನಡುವೆ ಭಾರಿ ಗುಂಡಿನ ಕಾಳಗ ನಡೆದಿದೆ.

ADVERTISEMENT

ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ರೆಸಾರ್ಟ್‌ನಲ್ಲಿ ತಂಗಿದ್ದವರು ಹೊರ ಬಾರದಂತೆ ಸೂಚನೆ ನೀಡಲಾಗಿತ್ತು. ಗುರುವಾರ ನಸುಕಿನವರೆಗೂ ಮುಂದುವರೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಉಳಿದವರು ಅರಣ್ಯದಲ್ಲಿ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.‌

ಎಚ್.ಡಿ.ಕೋಟೆ ತಾಲ್ಲೂಕಿಗೆ 80 ಕಿ.ಮೀ ದೂರದಲ್ಲಿ ಈ ಘಟನೆ ಸಂಭವಿಸಿದ್ದು, ನಕ್ಸಲ್ ತಂಡ ರಾಜ್ಯ ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ, ಕಟ್ಟೆಚ್ಚರ ವಹಿಸಲಾಗಿದೆ.‌ ವಿಕ್ರಂಗೌಡ ನೇತೃತ್ವದ ನಕ್ಸಲ್ ತಂಡ ಇದಾಗಿದ್ದು, ಇದರಲ್ಲಿ ಲತಾ ಎಂಬ ನಕ್ಸಲ್ ನಾಯಕಿಯೂ ಇದ್ದರು ಎಂದು ಹೇಳಲಾಗುತ್ತಿದೆ.

ಗುರುವಾರ ಇಡೀ ದಿನ ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್‌) ಸಿಬ್ಬಂದಿ ಕೇರಳಕ್ಕೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಿದರು.

ಕುಟ್ಟ, ಮಾಕುಟ್ಟ, ಇರ್ಫು, ಬ್ರಹ್ಮಗಿರಿ, ನಾಪೋಕ್ಲು, ಭಾಗಮಂಡಲ, ಸಂಪಾಜೆ ವ್ಯಾಪ್ತಿಯಲ್ಲಿ ಹದ್ದಿನ ಕಣ್ಣಿಡಲಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲೂ ವಯನಾಡು ಭಾಗದಲ್ಲಿ ಪ್ರತ್ಯಕ್ಷರಾಗಿದ್ದ ನಕ್ಸಲ್‌ ತಂಡವು ಕರಪತ್ರ ಎಸೆದು ಕಣ್ಮರೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.

2018ರ ಜನವರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಮಿತ್ತಮಜಲಿಗೆ ಮೂವರು ಶಸ್ತ್ರಸಜ್ಜಿತರು ‘ನಾವು ನಕ್ಸಲರು’ ಎಂದು ಹೇಳಿಕೊಂಡು ಬಂದಿದ್ದರು. ಅದೇ ತಂಡವು ಫೆ.3ರಂದು ಕೊಡಗಿನ ಗಡಿಭಾಗವಾದ ಕೊಯಿನಾಡು ವ್ಯಾಪ್ತಿಯ ಮನೆಯೊಂದರಲ್ಲಿ ದವಸ, ಧಾನ್ಯ ಸಂಗ್ರಹಿಸಿ ತೆರಳಿತ್ತು. ನಾಪೋಕ್ಲು ಸಮೀಪದ ನಾಲಾಡಿ ಕಾಫಿ ತೋಟದ ಲೈನ್‌ಮನೆಗೂ ಶಂಕಿತ ನಕ್ಸಲ್‌ ತಂಡ ಭೇಟಿ ಕೊಟ್ಟಿತ್ತು. ಎಎನ್‌ಎಫ್‌ ಸಿಬ್ಬಂದಿ, ಅರಣ್ಯ ಪ್ರದೇಶದಲ್ಲಿ ಶೋಧ ತೀವ್ರಗೊಳಿಸಿದ ನಂತರ ಶಂಕಿತ ನಕ್ಸಲ್‌ ತಂಡವು ಕೇರಳದ ಕಡೆಗೆ ತೆರಳಿತ್ತು. ಈಗ ಮತ್ತೆ ಮಲೆನಾಡಿನ ಗಡಿಭಾಗದಲ್ಲಿ ಆತಂಕ ಸೃಷ್ಟಿಯಾಗಿದೆ.

‘ನಕ್ಸಲರು ರಾಜ್ಯಕ್ಕೆ ಬರುವ ಸಾಧ್ಯತೆ ತೀರಾ ಕಡಿಮೆ ಇದೆ. ಆದಾಗ್ಯೂ, ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ’ ಎಂದು ದಕ್ಷಿಣ ವಲಯ ಐಜಿಪಿ ಉಮೇಶ್‌ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.