ADVERTISEMENT

‘ನೀಟ್‌’ ಗೊಂದಲ: ಪ್ರಶ್ನೆಪತ್ರಿಕೆ ಕೋಡ್ ಶೇಡ್‌ ವೇಳೆ ಪ್ರಮಾದ, ಅಂಕ ನಷ್ಟ!

ಪ್ರಶ್ನೆಪತ್ರಿಕೆ ಕೋಡ್ ಶೇಡ್‌ ವೇಳೆ ಪ್ರಮಾದ; ಕೋರ್ಟ್‌ ಮೆಟ್ಟಿಲೇರಲು ಪೋಷಕರ ನಿರ್ಧಾರ

ರಾಜೇಶ್ ರೈ ಚಟ್ಲ
Published 12 ಸೆಪ್ಟೆಂಬರ್ 2022, 6:18 IST
Last Updated 12 ಸೆಪ್ಟೆಂಬರ್ 2022, 6:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪ್ರಸಕ್ತ ಸಾಲಿನ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಉತ್ತರ ಪತ್ರಿಕೆಯಲ್ಲಿ (ಒಎಂಆರ್‌ ಹಾಳೆ) ಪ್ರಶ್ನೆಪತ್ರಿಕೆ ಶ್ರೇಣಿಯ (ಟೆಸ್ಟ್‌ ಬುಕ್‌ಲೆಟ್‌ ಕೋಡ್‌) ವೃತ್ತಕ್ಕೆ ಶೇಡ್‌ ಮಾಡುವ ವೇಳೆ ಆದ ಪ್ರಮಾದದಿಂದ ರಾಜ್ಯದ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂಕ ಕಳೆದುಕೊಂಡಿದ್ದಾರೆ.

ಅಷ್ಟೇ ಅಲ್ಲ, ಕೆಲ ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಸೀಟು ಗಿಟ್ಟಿಸಿಕೊಳ್ಳುವ ಅವಕಾಶದಿಂದಲೇ ವಂಚಿತರಾಗಿದ್ದಾರೆ. ಇದರಿಂದ ತೀವ್ರ ಹತಾಶರಾಗಿರುವ ವಿದ್ಯಾರ್ಥಿಗಳ ಪೋಷಕರು ಹೈಕೋರ್ಟ್‌ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ನೀಟ್‌ ನಡೆಸಿದ್ದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ), ಉತ್ತರಪತ್ರಿಕೆಯಲ್ಲಿ ಪ್ರಶ್ನೆಪತ್ರಿಕೆ ಬುಕ್‌ಲೆಟ್‌ ಕೆಳಗಡೆ ಮೂರು ಸಾಲುಗಳಲ್ಲಿ ಖಾಲಿ ವೃತ್ತಗಳನ್ನು ನೀಡಿದೆ. ಮೊದಲ ಸಾಲಿನ ವೃತ್ತಗಳಲ್ಲಿ ಪ್ರಶ್ನೆಪತ್ರಿಕೆಯ ಆಂಗ್ಲ (ಎಸ್‌, ಆರ್‌, ಕ್ಯೂ.. ಹೀಗೆ) ಅಕ್ಷರವನ್ನು ಶೇಡ್‌ ಮಾಡಬೇಕಿತ್ತು. ನಂತರದ ಒಂದು ಸಾಲಿನಲ್ಲಿ ಆಂಗ್ಲ ಅಕ್ಷರದ ಜೊತೆಗಿದ್ದ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳು ಶೇಡ್‌ ಮಾಡಬೇಕಿತ್ತು. ಆದರೆ, ಶೇಡ್‌ ಮಾಡುವ ವೇಳೆ ಹಲವು ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.

ADVERTISEMENT

‘ನನ್ನ ಮಗಳು, ಬಿಜಿಎಸ್‌ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುವ ಎಸ್‌.ಎಸ್‌. ಗಹನ, ಟೆಸ್ಟ್‌ ಬುಕ್‌ಲೆಟ್‌ನಲ್ಲಿ ಶೇಡ್‌ ಮಾಡಬೇಕಿದ್ದ ಸಾಲಿನಲ್ಲಿ ಎಸ್‌ 6ಗೆ ಮಾತ್ರ ಶೇಡ್ ಮಾಡಬೇಕಿತ್ತು. ಆದರೆ, ಎಸ್‌ 6 ಹಾಗೂ ಎಸ್‌ 7 ಎರಡಕ್ಕೂ ಶೇಡ್ ಮಾಡಿದ್ದಾಳೆ. ಎನ್‌ಟಿಎ ಪ್ರಕಟಿಸಿದ್ದ ಕೀ ಉತ್ತರದ ಪ್ರಕಾರ ಮಗಳಿಗೆ ಅಂದಾಜು 688 ಅಂಕ ಬರಬೇಕಿದೆ. ಆದರೆ, ಕೇವಲ 43 ಅಂಕ ಬಂದಿದೆ’ ಎಂದು ಕೆ.ಆರ್. ಪೇಟೆಯ ಎಸ್‌.ವಿ. ಶ್ರೀನಾಥ್‌ ಹೇಳಿದರು.

‘ನನ್ನ ಮಗಳು ನೀಟ್‌ ಉತ್ತಮವಾಗಿ ಬರೆದಿದ್ದು, ಕೀ ಉತ್ತರದ ಪ್ರಕಾರ ಅವಳಿಗೆ 552 ಅಂಕ ಬರಬಹುದೆಂಬ ವಿಶ್ವಾಸ ಇತ್ತು. ಆದರೆ, ಪ್ರಶ್ನೆಪತ್ರಿಕೆ ಶ್ರೇಣಿ ಬರೆಯುವ ವೇಳೆ ಎಸ್‌ 6 ವೃತ್ತಕ್ಕೆ ಶೇಡ್‌ ಮಾಡುವ ಬದಲು ಎಸ್‌ 7ನೇ ವೃತ್ತಕ್ಕೆ ಶೇಡ್‌ ಮಾಡಿದ್ದರಿಂದ 173 ಅಂಕ ಬಂದಿದೆ. ಇದರಿಂದಾಗಿ ಸರ್ಕಾರಿ ವೈದ್ಯಕೀಯ ಸೀಟು ಪಡೆಯುವ ಅವಕಾಶದಿಂದ ವಂಚಿತಳಾಗಿದ್ದಾಳೆ’ ಎಂದು ಮೈಸೂರಿನ ರೋಶಿನಿ ವಿ.ಎಸ್‌. ಗೌಡ ಎಂಬ ವಿದ್ಯಾರ್ಥಿಯ ತಂದೆ ಎಚ್‌.ಬಿ. ವಾಸು ತಿಳಿಸಿದರು. ‘ಟೆಸ್ಟ್‌ ಬುಕ್‌ಲೆಟ್‌ ಕೋಡ್‌ನ ಕೆಳಗಿನ ಯಾವ ಸಾಲಿನಲ್ಲಿ ವೃತ್ತಕ್ಕೆ ಶೇಡ್‌ ಮಾಡಬೇಕೆಂಬ ಬಗ್ಗೆ ಸ್ಪಷ್ಟ ಸೂಚನೆ ಒಎಂಆರ್‌ ಹಾಳೆಯಲ್ಲಿ ಇರಲಿಲ್ಲ. ಪರೀಕ್ಷಾ ಕೊಠಡಿಯ ಮೇಲ್ವಿಚಾರಕರೂ ಅದನ್ನು ಪರಿಶೀಲಿಸಿದ ಬಳಿಕ ತಮ್ಮ ಸಹಿ ಮಾಡಬೇಕಿತ್ತು. ಅಚಾತುರ್ಯ, ಅಜಾಗರೂಕತೆಯಿಂದ ಆಗಿರುವ ತಪ್ಪಿನಿಂದ ಹಲವು ವಿದ್ಯಾರ್ಥಿಗಳು ರ‍್ಯಾಂಕ್‌ ಗಳಿಸುವ ಅವಕಾಶ ಕಳೆದುಕೊಂಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಎನ್‌ಟಿಎ ಅಧ್ಯಕ್ಷರಿಗೆ ಇ–ಮೇಲ್‌‌
ನೀಟ್‌ನಲ್ಲಿ ಉತ್ತಮ ಅಂಕ ಪಡೆದು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ರೋಶಿನಿ ವಿ.ಎಸ್‌. ಗೌಡ, ಎನ್‌ಟಿಎ ಅಧ್ಯಕ್ಷರಿಗೆ ಇ–ಮೇಲ್‌ ಮತ್ತು ಪತ್ರ ಬರೆದಿದ್ದಾರೆ. ‘ಉತ್ತರ ಪತ್ರಿಕೆಯ ಪ್ರಶ್ನೆಪತ್ರಿಕೆ ಬುಕ್‌ಲೆಟ್‌ ಸಂಖ್ಯೆ ಎಸ್‌ 6 ಎಂದು ನಾನು ಶೇಡ್‌ ಮಾಡಬೇಕಿತ್ತು. ಆದರೆ, ಎಸ್‌ 7 ಎಂದಾಗಿದೆ. ಇದರಿಂದಾಗಿ ನನಗೆ ಕೇವಲ 173 ಅಂಕ ಬಂದಿದೆ. ನನ್ನ ಕಣ್ತಪ್ಪಿನಿಂದ ಆಗಿರುವ ಈ ಪ್ರಮಾದವನ್ನು ಸರಿಪಡಿಸಿ, ಅರ್ಹವಾಗಿ ನನಗೆ ಬರಬೇಕಾದ ಅಂಕ ಸಿಗಲು ನೆರವಾಗಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.